ಭ್ರಷ್ಟಾಚಾರವು ಸಮಾಜದ ಬಹುದೊಡ್ಡ ಪಿಡುಗು: ನ್ಯಾ.ಸಂತೋಷ್ ಹೆಗ್ಡೆ
ಉಡುಪಿ, ಸೆ.1: ಭ್ರಷ್ಟಾಚಾರವು ಸಮಾಜದ ಬಹುದೊಡ್ಡ ಪಿಡುಗು. ಪ್ರತಿಯೊಬ್ಬ ನಾಗರೀಕನೂ ತಮ್ಮ ಸಂಪಾದನೆಯಲ್ಲೇ ತೃಪ್ತಿ ಪಡುವ ಮೂಲಕ ದುರಾಸೆಯಿಂದ ಮುಕ್ತರಾಗಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024- 25ನೇ ಸಾಲಿನ ಪ್ರಥಮ ವರ್ಷದ ಇಂಜಿನಿಯ ರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಮಾರ್ಗದರ್ಶನ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭ್ರಷ್ಟಾಚಾರ ಕುರಿತಾಗಿ ಸಮಾಜದ ಭಾವನೆಯನ್ನು ಬದಲಾಯಿಸುವಲ್ಲಿ ಯುವ ಜನತೆಯೂ ಪ್ರಮುಖ ಪಾತ್ರ ವಹಿಸಬೇಕು. ಯುವ ಜನತೆಯು ತಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಪ್ರವೃತ್ತಿಯಿಂದ ಹೊರಬರಬೇಕು ಹಾಗೂ ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿದರು. ಡೀನ್ ಅಕಾಡೆಮಿಕ್ ಡಾ.ನಾಗರಾಜ ಭಟ್ ಸಂಸ್ಥೆಯ ನಿಯಮಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಹರೀಶ್ ಬೆಳ್ಮಣ್, ಸಂಸ್ಥೆಯ ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲೊಲಿಟ ಪ್ರಿಯ ಕ್ಯಾಸ್ಥಲಿನೊ ಪರಿಚಯಿಸಿದರು.
ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಪ್ರಥಮ ವರ್ಷದ ಇಂಜಿನಿಯರಿಂಗ್ ವಿಭಾಗದ ಸಂಯೋಜಕ ಡಾ.ದೀಪಿಕಾ ಬಿ.ವಿ. ವಂದಿಸಿದರು. ಸಂಸ್ಥೆಯ ಪ್ರಾಧ್ಯಾಪಕ ಪ್ರೀತಿ ಮತ್ತು ಸಚಿನ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.