ಡಿ.ದೇವರಾಜ ಅರಸು ಕ್ರಾಂತಿ ಪುರುಷ: ಡಾ.ರಾಜೇಂದ್ರ ನಾಯಕ್
ಕುಂದಾಪುರ: ಅಲ್ಪಸಂಖ್ಯಾತರ ಧುರೀಣರಾಗಿ, ಬಹುಸಂಖ್ಯಾತರ ಮಿತ್ರರಾಗಿ, ಪರಿವರ್ತನೆ ಹರಿಕಾರ ಎಂದು ಕರೆಸಿ ಕೊಂಡ ಮಾಜಿ ಖ್ಯಮಂತ್ರಿ ದಿ| ಡಿ.ದೇವರಾಜ ಅರಸು ಓರ್ವ ಕ್ರಾಂತಿ ಪುರುಷ ಎಂದು ಕೋಟೇಶ್ವರದ ಎಸ್.ಕೆ.ವಿ.ಎಂ.ಎಸ್. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶು ಪಾಲರಾದ ಡಾ. ರಾಜೇಂದ್ರ ಎಸ್. ನಾಯಕ್ ಹೇಳಿದರು.
ಉಡುಪಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕುಂದಾಪುರ ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಆರ್.ಎನ್.ಶೆಟ್ಟಿ ಮಿನಿ ಹಾಲ್‌ನಲ್ಲಿ ರವಿವಾರ ಹಮ್ಮಿಕೊಂಡ ಡಿ.ದೇವರಾಜ ಅರಸುರವರ ೧೦೮ನೇ ಜನ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಉಳುವವನೆ ಹೊಲದೊಡೆಯ ಕಾನೂನು ಮೂಲಕ ಶ್ರಮಿಕ ವರ್ಗಕ್ಕೂ ಜಮೀನು ಸಿಗಬೇಕೆಂಬ ಯೋಜನೆ, ವಿದ್ಯಾರ್ಥಿ ಗಳಿಗೆ ಊಟ, ವಸತಿ ಜೊತೆಗೆ ವಿದ್ಯಾರ್ಥಿವೇತನ ಸೌಲಭ್ಯ ಕಲ್ಪಿಸಿದ ಮಹಾನುಭಾವ. ಕೂಲಿಗಾಗಿ ಕಾಳು ಯೋಜನೆ, ಸ್ವಯಂ ನಿವೃತ್ತಿ, ಭಾಗ್ಯ ಜ್ಯೋತಿ, ಕಾಳಿ ಯೋಜನೆ, ವೃದ್ಧಾಪ್ಯ ವೇತನದ ಜೊತೆಗೆ ಜೀತ ಪದ್ದತಿ, ಮಲಹೊರುವ ಅನಿಷ್ಟ ಪದ್ದತಿಗೆ ಕಡಿವಾಣ ಹಾಕುವ ಮೂಲಕ ಮನುಷ್ಯ ಮುನುಷ್ಯನನ್ನು ಆಳಾಗಿ, ಕೀಳಾಗಿ ದುಡಿಸಿ ಕೊಳ್ಳುತ್ತಿದ್ದ ನೀಚ ಸಂಸ್ಕೃತಿಗೆ ಕಡಿವಾಣ ಹಾಕಿದರು ಎಂದರು.
ಸಿಎಂ ಆಗಿದ್ದಾಗ ಸಾಮಾಜಿಕ ಕಳಕಳಿಯ ಕಾನೂನು ಅನುಷ್ಟಾನದ ಮೂಲಕ ದೀನರು, ಕಷ್ಟದಲ್ಲಿದ್ದವರ ಪರ ಕೆಲಸ ಮಾಡಿ ಅವರ ನೋವು ನಿವಾರಿಸುವಲ್ಲಿ ಶ್ರಮಿಸಿದರು. ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದ ಡಿ. ದೇವರಾಜ ಅರಸು ರವರ ಆದರ್ಶ ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು. ಬದುಕಿನ ಶಿಕ್ಷಣದಿಂದ ವಂಚಿತರಾಗುತ್ತಿರುವ ಕಾಲಘಟ್ಟ ದಲ್ಲಿ ಅರಸುರವರ ಬದುಕು ಪ್ರೇರಣೆಯಾಗಬೇಕು ಎಂದು ಅವರು ತಿಳಿಸಿದರು.
ಕೆದೂರು, ಕೋಟೇಶ್ವರ, ಕುಂದಾಪುರ ಹಾಸ್ಟೆಲ್ ಅಡುಗೆಯವರಾದ ರೇವತಿ, ಶಲ್ಮಾ, ಮಾಧವ ಬಿಲ್ಲವ ಹಾಗೂ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಟೋಟಗಳಲ್ಲಿ ಭಾಗವಹಿಸಿ ವಿಜೇತರಾದ ವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವನ್ನು ಕುಂದಾಪುರ ಡಿವೈಎಸ್ಪಿಬೆಳ್ಳಿಯಪ್ಪ ಕೆ.ಯು. ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್. ವಹಿಸಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಪುರಸಭೆಯ ಆರೋಗ್ಯ ನಿರೀಕ್ಷಕ ಶರತ್ ಖಾರ್ವಿ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಶಿಕಲಾ ಸ್ವಾಗತಿಸಿದರು. ವಿದ್ಯಾರ್ಥಿನಿ ಚೈತ್ರಾ ಕಾರ್ಯ ಕ್ರಮ ನಿರೂಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತರಣಾಧಿಕಾರಿ ಆಶಾದೇವಿ ವಂದಿಸಿದರು. ಕುಂದಾಪುರ ನಗರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಆಶಲತಾ ಪರಿಚಯಿಸಿದರು.