ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸವರ್ಣೀಯರಿಂದ ದಲಿತ ದೌರ್ಜನ್ಯ: ಮಂಜುನಾಥ್ ಗಿಳಿಯಾರು ಆರೋಪ
ನಾಡದ ದಲಿತ ಮುಖಂಡ ಹಲ್ಲೆ ಖಂಡಿಸಿ ದಸಂಸ ಪ್ರತಿಭಟನೆ
ಕುಂದಾಪುರ, ಸೆ.25: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ ಗುಡ್ಡೆಯಂಗಡಿಯಲ್ಲಿ ಗಣೇಶೋತ್ಸವ ವೇಳೆ ದಲಿತ ಮುಖಂಡ ಸುರೇಶ್ ಹಾಗೂ ಅವರೊಂದಿಗಿದ್ದ ಸುಕುಮಾರ್ ಎಂಬವರ ಮೇಲಿನ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ನಾಡ ರಾಮನಗರದ ಅಂಬೇಡ್ಕರ್ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಹಿಂದೂ ಸವರ್ಣೀಯ ಜಾತಿಗಳ ಜೊತೆ ದಲಿತರು ಭಾಗವಹಿಸಬಾರದು ಮತ್ತು ಸಮಾಜದಲ್ಲಿ ಮುನ್ನೆಲೆಗೆ ಬರಬಾರದು ಎಂಬ ಉದ್ದೇಶದಿಂದ ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾ ದಲಿತ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು ಮಾತನಾಡಿ, ದಲಿತ ಮುಖಂಡ ಸುರೇಶ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ತಕ್ಷಣ ಬಂಧಿಸಬೇಕು. ದಸಂಸ ಸಂಘಟನೆ ಕಾನೂನಿಗೆ ಬೆಲೆ ಕೊಟ್ಟು ಇಲಾಖೆ ಜೊತೆ ಕೈಜೋಡಿಸುತ್ತದೆ. ಆದರೆ ತಾಳ್ಮೆ ಪರೀಕ್ಷೆ ಮಾಡುವುದು ಸರಿಯಲ್ಲ. ಶೀಘ್ರ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತರ ಮೇಲೆ ನಿತ್ಯ ದೌರ್ಜನ್ಯ ಜಾಸ್ಥಿಯಾಗುತ್ತಿದ್ದು ತಳ ಸಮುದಾಯದವರ ರಕ್ಷಣೆಯಲ್ಲಿ ಪೊಲೀಸರು ಕಠಿಬದ್ಧ ರಾಗಬೇಕು. ರಾಜ್ಯ ಸರಕಾರ ಕೂಡ ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ದಸಂಸ ಮೈಸೂರು ವಿಭಾಗ ಸಂಚಾಲಕ ವಿಶ್ವನಾಥ ಬೆಳ್ಳಂಪಳ್ಳಿ, ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ ಮಾತನಾಡಿದರು.
ಕರ್ನಾಟಕ ರಾಜ್ಯ ದಸಂಸ ಜಿಲ್ಲಾ ಸಮಿತಿ ಸದಸ್ಯರಾದ ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ್ ನಾಗೂರು, ಕುಂದಾಪುರ ತಾಲೂಕು ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ, ಬೈಂದೂರು ತಾ. ಸಂಘಟನಾ ಸಂಚಾಲಕ ರಮೇಶ್ ಪಡುಕೋಣೆ, ಬೈಂದೂರು ತಾ. ಸಂಚಾಲಕ ನಾಗರಾಜ ಉಪ್ಪುಂದ, ಸ್ಥಳೀಯ ಮುಖಂಡರಾದ ಸತೀಶ್ ಕೆ. ರಾಮನಗರ, ಶಂಭು ಗುಡ್ಡಮ್ಮಾಡಿ ಉಪಸ್ಥಿತರಿದ್ದರು.
ಶೀಘ್ರವೇ ಬಂಧನ: ಡಿವೈಎಸ್ಪಿ ಭರವಸೆ
ಸ್ಥಳಕ್ಕೆ ಆಗಮಿಸಿದ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪಕೆ.ಯು. ಮಾತನಾಡಿ, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಕಾನೂನು ಚೌಕಟ್ಟಿನಲ್ಲಿ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗಂಗೊಳ್ಳಿ ಎಸ್ಸೈ ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಹಾಜರಿದ್ದರು.