ಭಾರತದ ಪ್ರಜಾಪ್ರಭುತ್ವದ ತಹಳದಿ ಸಂವಿಧಾನ: ಉಡುಪಿ ಡಿಸಿ ಡಾ.ವಿದ್ಯಾ ಕುಮಾರಿ
ಸಹಸ್ರಾರು ಮಂದಿಯಿಂದ ಏಕಕಾಲದಲ್ಲಿ ಸಂವಿಧಾನದ ಪೀಠಿಕೆ ವಾಚನ
ಉಡುಪಿ: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಏಕಕಾಲದಲ್ಲಿ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಕಾರ್ಯಕ್ರಮವನ್ನು ಇಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಏಕಕಾಲದಲ್ಲಿ ರಾಜ್ಯಾದ್ಯಂತ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವುದರ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಲು ಯೋಜನೆಯಂತೆ ಈ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಅದರಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಸಂವಿಧಾನದ ಪೀಠಿಕೆಯನ್ನು ಓದಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಜಗತ್ತಿನ ಬಹಳ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ತಳಹದಿ ಸಂವಿಧಾನ ಆಗಿದೆ. ಎಲ್ಲ ರೀತಿಯ ಕಾನೂನು ಈ ಸಂವಿಧಾನದಡಿಯಲ್ಲಿ ಮತ್ತು ಅದಕ್ಕೆ ಅನುಗುಣ ವಾಗಿ ರಚನೆಯಾಗುತ್ತದೆ. ಆದುದರಿಂದ ಪ್ರತಿಯೊಬ್ಬರು ಈ ದೇಶದ ಸಂವಿಧಾನವನ್ನು ಅಗತ್ಯವಾಗಿ ಓದಬೇಕು ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಕೆಲವರು ಪ್ರಜಾಪ್ರಭುತ್ವದ ಮಹತ್ವವನ್ನು ಮರೆಯುತ್ತಿ ದ್ದಾರೆ ಮತ್ತು ಸಂವಿಧಾನದ ಮಹತ್ವವನ್ನು ಅಲ್ಲಗಳೆಯುತ್ತಿದಗ್ದಾರೆ. ಅದು ಬಿಟ್ಟು ತಮ್ಮದೇ ವೈಯಕ್ತಿಕ ನೆಲೆಯಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಆದುದರಿಂದ ವಿದ್ಯಾರ್ಥಿಗಳು ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದರಿಂದ ನನ್ನ ಧರ್ಮ, ಜಾತಿ, ಮನೆ ಎಂಬ ಸಂಕುಚಿತ ಭಾವನೆಯಿಂದ ಹೊರ ಬಂದು ವಿಶಾಲವಾದ ಮನೋಭಾವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಎಚ್., ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ್ ಪಿ.ಕೆ., ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಶರ್ಮಿಳಾ, ಅಜ್ಜರಕಾಡು ಜಿ.ಶಂಕರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಸುಮಾ ಉಪಸ್ಥಿತರಿದ್ದರು.
ಕುಂದಾಪುರ ಬಿಬಿ ಹೆಗ್ಡೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರವೀಣ್ ಮೊಗವೀರ ಸಂವಿಧಾನದ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು ವಂದಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅದೇ ರೀತಿ ಜಿಲ್ಲೆಯ ಎಲ್ಲ ಸರಕಾರಿ, ಅನು ದಾನಿತ ಹಾಗೂ ಅನುದಾನ ರಹಿತ ಶೈಕ್ಷಣಿಕ ಸಂಸ್ಥೆಗಳು, ಮಣಿಪಾಲ ಮಾಹೆ, ಸರಕಾರಿ, ಅರೆ ಸರಕಾರಿ, ನಿಗಮ ಮಂಡಳಿಗಳು, ಗ್ರಾಪಂ ಕೇಂದ್ರಗಳಲ್ಲಿ ಸಿಬ್ಬಂದಿ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಕೈಗಾರಿಕೆಗಳಲ್ಲಿ ಕಾರ್ಮಿಕರು, ನೌಕರರು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿಯೂ ಏಕಕಾಲದಲ್ಲಿ ಸಂವಿಧಾನ ಪೀಠಿಕೆಯನ್ನು ಓದಲಾಯಿತು.
‘ಇನ್ನು ಮುಂದೆ ಜಿಲ್ಲೆಯ ಎಲ್ಲ ಸರಕಾರಿ ಶಾಲಾ ಕಾಲೇಜುಗಳಲ್ಲಿ ವಾರದಲ್ಲಿ ಒಂದು ದಿನ ಬೆಳಗ್ಗಿನ ಪ್ರಾರ್ಥನೆಯ ಬಳಿಕ ಸಂವಿಧಾನ ಪೀಠಿಕೆಯನ್ನು ಓದಬೇಕು. ಕೆಲವು ಕಡೆ ಇದು ಸಮಪರ್ಕವಾಗಿ ಅನುಷ್ಠಾನ ಆಗಿಲ್ಲ ಎಂಬ ಮಾಹಿತಿ ಗಮನಕ್ಕೆ ಬಂದಿದೆ. ಆದರೆ ಇನ್ನು ಹಾಗೇ ಆಗಬಾರದು. ಎಲ್ಲ ಶಾಲಾ ಕಾಲೇಜುಗಳಲ್ಲಿಯೂ ಕಡ್ಡಾಯವಾಗಿ ಓದಬೇಕು’
-ಡಾ.ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ