ಉಡುಪಿ ಜಿಲ್ಲೆಯಲ್ಲಿ ಲಭ್ಯವಿರುವ ಮರಳು, ಕಲ್ಲು, ಎಂ.ಸ್ಯಾಂಡ್ ವಿವರ ಬಿಡುಗಡೆ: ಡಿಸಿ ಡಾ. ವಿದ್ಯಾಕುಮಾರ್
"ಜಿಪಿಎಸ್ ಅಳವಡಿಕೆಗೆ ಅ.7ರವರೆಗೆ ಕಾಲಾವಕಾಶ"
ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರ್
ಉಡುಪಿ, ಸೆ.30: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಲಭ್ಯವಿರುವ ಮರಳು, ಕಟ್ಟಡಕಲ್ಲು, ಕೆಂಪು ಕಲ್ಲು, ಮುರಕಲ್ಲು, ಸಾಮಾನ್ಯ ಮರಳು, ಉಪಖನಿಜಗಳ ಉತ್ಪಾದನೆ ಹಾಗೂ ಬೇಡಿಕೆಗಳ ಸರಬರಾಜು ಮಾಹಿತಿಯನ್ನು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರ್ ಪತ್ರಿಕಾ ಹೇಳಿಕೆ ಮೂಲಕ ಬಿಡುಗಡೆಗೊಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 127 ಅಧಿಕೃತ ಕಟ್ಟಡ ಕಲ್ಲುಗಣಿ ಗುತ್ತಿಗೆಗಳಿಂದ ಒಟ್ಟು 32,62,808 ಮೆ.ಟನ್ ಪ್ರಮಾಣದ ಉಪ ಖನಿಜವನ್ನು ವಾರ್ಷಿಕವಾಗಿ ಉತ್ಪಾದನೆ ಮಾಡಲಾಗುತ್ತಿದೆ. ಜಿಲ್ಲೆಯ ಬೇಡಿಕೆಯ ಪ್ರಮಾಣವು ಅಂದಾಜು 20,00,000 ಮೆ.ಟನ್ ಗಳಾಗಿದ್ದು, ಜಿಲ್ಲೆಯ ಬೇಡಿಕೆಯನ್ನು ಪೂರೈಸಲಾಗುತ್ತಿದೆ.
ಸಾಮಾನ್ಯ ಮರಳು: ಒಂದು ತಿಂಗಳಿಗೆ ಅಂದಾಜು 65,500 ಮೆ.ಟನ್ ಪ್ರಮಾಣದ ಸಾಮಾನ್ಯ ಮರಳು ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾಗಿದ್ದು, ಈಗಾಗಲೇ ಒಟ್ಟು 1,32,215 ಮೆ.ಟನ್ ಪ್ರಮಾಣದ ಸಾಮಾನ್ಯ ಮರಳು ಲಭ್ಯವಿ ರುತ್ತದೆ. ಉಳಿದ ಗ್ರಾಪಂಗಳ ಕಾರ್ಯ ನಿರ್ವಹಿಸದ 41 ಮರಳು ಬ್ಲಾಕುಗಳಲ್ಲಿ ಅಕ್ಟೋಬರ್ ತಿಂಗಳಿಂದ ಸಾಮಾನ್ಯ ಮರಳನ್ನು ಪೂರೈಸಲಾಗುತ್ತದೆ.
ಪರಿಸರ ವಿಮೋಚನಾ ಪತ್ರದಲ್ಲಿ ಜೂನ್ 15ರಿಂದ ಅ.15ರವರೆಗೆ ನಿರ್ಬಂಧವಿದ್ದು, ಪ್ರಸ್ತುತ ಮರಳು ಗಣಿ ಗುತ್ತಿಗೆಗಳಲ್ಲಿ ಮರಳುಗಾರಿಕೆ ಕಾರ್ಯವು ಸ್ಥಗಿತಗೊಂಡಿರುತ್ತದೆ. ಅದರಂತೆ ಒಟ್ಟು 03 ಮರಳು ಗುತ್ತಿಗೆ ಗಳಿಂದ 96,220 ಮೆ.ಟನ್ ಸಾಮಾನ್ಯ ಮರಳು ಲಭ್ಯವಿರುತ್ತದೆ.
ಪರಿಸರ ವಿಮೋಚನಾ ಪತ್ರದ ಪ್ರಕ್ರಿಯೆಯಲ್ಲಿರುವ 19 ಮರಳು ಬ್ಲಾಕು ಗಳಲ್ಲಿ ಒಟ್ಟು 3,44,603 ಮೆ.ಟನ್ ಪ್ರಮಾಣದ ಮರಳು ಲಭ್ಯವಿರುತ್ತದೆ. ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಬಾಕಿ ಇರುವ ಒಟ್ಟು 36 ಮರಳು ಬ್ಲಾಕ್ ಗಳಲ್ಲಿ ಒಟ್ಟು 12,01,751 ಮೆ.ಟನ್ ಪ್ರಮಾಣದ ಮರಳು ಲಭ್ಯವಿರುತ್ತದೆ. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1,61,360 ಮೆ.ಟನ್ ಪ್ರಮಾಣದ ಎಂ-ಸ್ಯಾಂಡ್ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ ಸಾಮಾಗ್ರಿಗಳಿಗೆ ಉಡುಪಿ ಜಿಲ್ಲೆಯಲ್ಲಿ ಕೊರತೆ ಯಿರುವುದಿಲ್ಲ. ಸರಕಾರವು 2022ನೇ ಸಾಲಿನ ಡಿಸೆಂಬರ್ ತಿಂಗಳಿನಿಂದ ಅನ್ವಯವಾಗುವಂತೆ ಉಪಖನಿಜ ಸರಬರಾಜು ಮಾಡುವ ಎಲ್ಲಾ ವಾಹನಗಳಿಗೆ ಜಿ.ಪಿ.ಎಸ್ ಅನ್ನು ಕಡ್ಡಾಯಗೊಳಿಸಿದ್ದು, ಅದರಂತೆ ಜಿ.ಪಿ.ಎಸ್ ಅಳವಡಿಸಿಕೊಂಡಲ್ಲಿ ಐಎಲ್ಎಂಎಸ್(ಸಮಗ್ರ ಗುತ್ತಿಗೆ ನಿರ್ವಹಣೆ ವ್ಯವಸ್ಥೆ) ತಂತ್ರಾಂಶದಲ್ಲಿ ಖನಿಜ ಸಾಗಾಣಿಕೆ ಪರವಾನಿಗೆಯನ್ನು ತೆಗೆಯಲು ಸಾಧ್ಯ ವಾಗುತ್ತದೆ. ಕಟ್ಟಡ ಸಾಮಾಗ್ರಿ ಸಾಗಾಣಿಕೆ ವಾಹನಗಳಿಗೆ ಇದೇ ಅ.7ರವರೆಗೆ ಜಿ.ಪಿ.ಎಸ್ ಅನ್ನು ಅಳವಡಿಸಿಕೊಳ್ಳಲು ಕಾಲಾವಕಾಶವನ್ನು ನೀಡಲಾಗಿದೆ.
ಆದ್ದರಿಂದ ಕಟ್ಟಡ ನಿರ್ಮಾಣ ಮಾಡುವವರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಕಟ್ಟಡ ಕಲ್ಲು, ಜೆಲ್ಲಿ, ಎಂ-ಸ್ಯಾಂಡ್ ಅವಶ್ಯಕತೆಯಿದ್ದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಂಟ್ರೋಲ್ ರೂಮ್ನ ದೂರವಾಣಿ ಸಂಖ್ಯೆ: 0820-2950088ಗೆ ಬೆಳಿಗ್ಗೆ 10:00ರಿಂದ ಸಂಜೆ 6:00 ಗಂಟೆ ಯವರೆಗೆ ಸಂಪರ್ಕಿಸಬಹುದಾಗಿದೆ. ಹೀಗಾಗಿ ಲಾರಿ ಮಾಲಕರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 7,86,000 ಮೆ.ಟನ್ ಸಾಮಾನ್ಯ ಮರಳಿಗೆ ಬೇಡಿಕೆ ಇದೆ. ಉಪಖನಿಜಗಳ ಲಭ್ಯತೆ 6,37,784ಮೆ.ಟನ್ ಇದೆ. ಅದೇ ರೀತಿ 20,00,000 ಕಟ್ಟಡ ಕಲ್ಲಿಗೆ ಬೇಡಿಕೆ ಇದ್ದು, 32,62,808 ಲಭ್ಯತೆ ಇದೆ. ಎಂ.ಸ್ಯಾಂಡ್ 1,80,000 ಮೆಟ್ರಿಕ್ ಟನ್ ಬೇಡಿಕೆ ಇದ್ದು, 1,61,360 ಮೆ.ಟನ್ ಲಭ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.