ವಿದ್ಯುತ್- ರೈಲ್ವೆ ಖಾಸಗೀಕರಣ ವಿರೋಧಿಸಿ ಕುಂದಾಪುರದಲ್ಲೂ ಧರಣಿ
ಕುಂದಾಪುರ : ವಿದ್ಯುತ್ ಮತ್ತು ರೈಲ್ವೆ ಖಾಸಗೀಕರಣ ವಿರೋಧಿಸಿ ರೈತ ಕಾರ್ಮಿಕ ಕೂಲಿಕಾರರ ಮಹಾಧರಣಿಯ ಪ್ರಚಾರೋಂದಲನ ಕುಂದಾಪುರ ಶಾಸ್ತ್ರಿ ಸರ್ಕಲ್ ಸಮೀಪ ಮಂಗಳವಾರ ಸಂಜೆ ನಡೆಯಿತು.
ಸಿಪಿಎಂ ವಲಯ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಕೇಂದ್ರ ಸರಕಾರ ಕಾರ್ಪೊರೇಟ್ ಬಂಡವಾಳಪರ ನವ ಉದಾರವಾದ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿರುವುದರಿಂದ ದೇಶದ ದುಡಿಯುವ ಜನತೆ ಸಂಕಷ್ಟಕ್ಕೆ ಒಳಗಾಗುತ್ತಿದೆ. ಸರಕಾರದ ತಪ್ಪುನೀತಿಗಳಿಂದ ರೈತರು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಹಾಗೂ ಬೆಳೆದ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಬೆಲೆ ಸಿಗದೆ ಕೃಷಿ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದೂರಿದರು.
ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಚಿಕ್ಕ ಮೊಗವೀರ, ಬೀಡಿ ಕಾರ್ಮಿಕರ ಸಂಘದ ಮಹಾಬಲ ವಡೇರಹೋಬಳಿ, ಬಲ್ಕಿಸ್ ಬಾನು, ಸಿಐಟಿಯು ಸಂಚಾಲಕ ಚಂದ್ರಶೇಖರ ವಿ., ಪ್ರಕಾಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರಿನಲ್ಲಿ ಧರಣಿ: ರೈಲ್ವೆ ಹಾಗೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರಕಾ ರದ ನೀತಿಯನ್ನು ಖಂಡಿಸಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕೃಷಿಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಬೈಂದೂರು ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಕೆ.ಶಂಕರ್, ಅಖಿಲ ಭಾರತ ಕೃಷಿಕೂಲಿಕಾರರ ಸಂಘ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಮಾತನಾಡಿದರು. ಕಾರ್ಮಿಕ ಮುಖಂಡ ರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ರಾಮ ಕಂಬದಕೋಣೆ ಮೊದಲಾದವರು ಉಪಸ್ಥಿತರಿದ್ದರು.