ವಿಕ್ರಂ ಗೌಡ ಎನ್ ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆ ವಿಚಾರವಾಗಿ ಸಿಎಂ ಜೊತೆ ಚರ್ಚೆ: ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ, ನ.30: ಹೆಬ್ರಿ ಸಮೀಪದ ಪೀತಬೈಲಿನಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸರಕಾರದ ತೀರ್ಮಾನ. ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರ ಬಳಿ ಮಾತನಾಡುತ್ತೇನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ವಿಕ್ರಂ ಗೌಡ ಎನ್ ಕೌಂಟರ್ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಸರಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ ಈ ಬಗ್ಗೆ ಸಂಶಯ ಇದ್ದವರಿಗೆ ಮತ್ತೆ ಸ್ಪಷ್ಟನೆ ಕೊಡಲು ನಾವು ತಯಾರಿದ್ದೇವೆ ಎಂದರು.
ಕೂಂಬಿಂಗ್ ಮಾಡುವ ಸಂದರ್ಭದಲ್ಲಿ ಈ ಎನ್ ಕೌಂಟರ್ ನಡೆದಿದೆ. ವಿಕ್ರಂ ಗೌಡ ಬಳಿ ಕೂಡ ಶಸ್ತ್ರಾಸ್ತ್ರಗಳು ಇದ್ದವು. ಆತ ಸಹ ಒಂದು ಬಾರಿ ಫೈರಿಂಗ್ ಮಾಡಿದ್ದಾನೆ. ಈ ವೇಳೆ ಪ್ರತಿ ದಾಳಿ ಮಾಡದಿದ್ದರೆ ಪೊಲೀಸರ ಜೀವ ಹಾನಿ ಆಗುತ್ತಿತ್ತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಕ್ಸಲೈಟನ್ನು ಬೇರು ಸಮೇತ ಕಿತ್ತು ಹಾಕಬೇಕೆಂಬುದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ನಿಲುವಾಗಿದೆ. ಪರ ವಿರೋಧ ಚರ್ಚೆ ಎಲ್ಲಾ ಸಂದರ್ಭದಲ್ಲಿ ಇರುತ್ತದೆ ಎಂದು ಪ್ರತಿಕ್ರಿಯಿಸಿದರು.