ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾಪೋಷಕ್ ಸಹಾಯಧನ ವಿತರಣೆ
ಉಡುಪಿ, ಸೆ.24: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವತಿಯಿಂದ ಯಕ್ಷನಿಧಿಯ ಸದಸ್ಯ ಕಲಾವಿದರ ಮಕ್ಕಳ ವಿದ್ಯಾ ಭ್ಯಾಸಕ್ಕೆ ನೆರವು ನೀಡುವ ನಿಟ್ಟಿನಲ್ಲಿ 48 ಕಲಾವಿದರ 54 ಮಕ್ಕಳಿಗೆ 5,24,000ರೂ. ಸಹಾಯಧನವನ್ನು ರವಿವಾರ ಕಲಾರಂಗದ ಕಚೇರಿಯಲ್ಲಿ ವಿತರಿಸಲಾಯಿತು.
ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಕಲಾವಿದರು ಸಮಾಜದ ಆಸ್ತಿ. ಅವರ ಯೋಗ ಕ್ಷೇಮ ನೋಡಿಕೊಳ್ಳುವುದು ಸಮಾಜದ ಹೊಣೆ ಎಂದು ಹೇಳಿದರು.
ಸಂಸ್ಥೆಯ ಮಹಾದಾನಿ, ಅಭಿಮಾನಿ ಮಂಟಪದ ಡಾ.ಪಿ.ಮನೋಹರ ಉಪಾಧ್ಯ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಸಮಾಜದ ಋಣ ಇದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಅದನ್ನು ತೀರಿಸ ಬೇಕಾದ ಕರ್ತವ್ಯಕ್ಕೆ ಬದ್ಧರಾಗಬೇಕು ಎಂದು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ ಮತ್ತು ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಾಲ ಆಚಾರ್ಯ, ಲಾಸಿನಿ ಬಿ.ಶೆಣೈ ಉಪಸ್ಥಿತರಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ವಿದ್ಯಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು.