ಉಡುಪಿ ಜಿಲ್ಲಾ ಮಟ್ಟದ ಮ್ಯಾರಥಾನ್‌ಗೆ ಜಿಲ್ಲಾಧಿಕಾರಿ ಚಾಲನೆ
ಉಡುಪಿ, ಆ.31: ಹೆಚ್‌ಐವಿ/ ಏಡ್ಸ್ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಮುಂಜಾನೆ ಆಯೋಜಿಸಿದ್ದ ಜಿಲ್ಲಾ ಮಟ್ಟದ 5 ಕಿ.ಮೀ. ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಉಡುಪಿ ಎಂ.ಜಿ.ಎಂ ಕಾಲೇಜಿನ ಪ್ರಯಾಗ ಶೆಟ್ಟಿ ಹಾಗೂ ಮಹಿಳೆಯರ ವಿಭಾಗದಲ್ಲಿ ನಿಟ್ಟೆ ಸ್ಪೋರ್ಟ್ಸ್ ಕ್ಲಬ್ ನಂದಿನಿ ಅಗ್ರಸ್ಥಾನ ಪಡೆಯು ವುದರೊಂದಿಗೆ ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಂಡರು.
ಉಳಿದಂತೆ ಪುರುಷರ ವಿಭಾಗದಲ್ಲಿ ಆನಂದ ತೀರ್ಥ ಕಾಲೇಜಿನ ನಾಗರಾಜ ಡೈಯಸ್ ಮತ್ತು ವಿವೇಕಾನಂದ ಎರಡು ಮತ್ತು ಮೂರನೇ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ನಿಟ್ಟೆ ಸ್ಪೋರ್ಟ್ಸ್ ಕ್ಲಬ್‌ನ ಪ್ರತೀಕ್ಷಾ ಮತ್ತು ಸಾಕ್ಷಿ ಇವರು ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪದಕಗಳನ್ನು ನೀಡಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕ, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಷನ್, ಸಾಯಿರಾಧಾ ಗ್ರೂಪ್, ರಾಜ್ ಫಿಶ್‌ಮಿಲ್ ಮತ್ತು ಆಯಿಲ್ ಕಂಪನಿ ಮಲ್ಪೆ, ಆದರ್ಶ ಆಸ್ಪತ್ರೆ ಉಡುಪಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಮತ್ತು ರೋಟರಿ ಕ್ಲಬ್ ಉಡುಪಿ ಮಿಡ್‌ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಈ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತು.
ಹೆಚ್‌ಐವಿ/ ಏಡ್ಸ್ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ಜಿಲ್ಲಾ ಮಟ್ಟದ 5 ಕಿ.ಮೀ. ದೂರದ ಮ್ಯಾರಥಾನ್ ಸ್ಪರ್ಧೆಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಇಂದು ಮುಂಜಾನೆ ಚಾಲನೆ ನೀಡಿದ್ದರು.
ಈ ಸಂದರ್ಭ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಮಹಾಮಾರಿ ಏಡ್ಸ್‌ಗೆ ತುತ್ತಾಗುತ್ತಿದ್ದು, ರೋಗ ಒಂದು ಬಾರಿ ತಗುಲಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಏಡ್ಸ್ ರೋಗದ ಕುರಿತು ಜಾಗೃತಿ ವಹಿಸಿ, ಸೋಂಕು ತಗಲದಂತೆ ಎಚ್ಚರ ಹೊಂದುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಏಡ್ಸ್ ಕುರಿತು ಜನರಿಗೆ ಮುಕ್ತ ಸಂದೇಶ ನೀಡುವ ಉದ್ದೇಶದಿಂದ ಮ್ಯಾರಥಾನ್‌ನ್ನು ಅಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಎಂ. ಪುರುಷೋತ್ತಮ, ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ್, ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಚಿದಾನಂದ ಸಂಜು ಎಸ್., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ ಶೆಟ್ಟಿ, ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಆದರ್ಶ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಮಲಾ ಚಂದ್ರಶೇಖರ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ದಿನೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಚಿದಾನಂದ ಸಂಜು ಸ್ವಾಗತಿಸಿದರೆ ಮಂಜುನಾಥ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮ್ಯಾರಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 350ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.