ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಮಹೇಶ್ ಶೆಟ್ಟಿ ತಿಮರೋಡಿಗೆ ಇಲ್ಲವೆ ?: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ
ಕುಯಿಲಾಡಿ ಸುರೇಶ್ ನಾಯಕ್ - ಮಹೇಶ್ ಶೆಟ್ಟಿ ತಿಮರೋಡಿ
ಉಡುಪಿ : ಸೌಜನ್ಯಾ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಉಡುಪಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಹಿತ ಬಿಜೆಪಿ ಹಿರಿಯ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಶೋಭಾ ಕರಂದ್ಲಾಜೆಯವರ ಬಗ್ಗೆ ಮಾತನಾಡುವಾಗ ಬಳಸುವ ಪದ ಮತ್ತು ವಿಚಾರದ ಬಗ್ಗೆ ಎಚ್ಚರ ವಹಿಸುವುದು ಸೂಕ್ತ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ತಿಮರೋಡಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ಇದರಲ್ಲಿ ರಾಜಕೀಯ ವಾಸನೆ ಇರುವುದು ಸ್ಪಷ್ಟವಾಗುತ್ತಿದೆ. ಹೆಣ್ಣಿಗೆ ನ್ಯಾಯ ಕೊಡಬೇಕು ಎಂದು ಹೋರಾಟಕ್ಕೆ ಇಳಿದಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.
ಸೌಜನ್ಯಾ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ಸೌಜನ್ಯಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತಿದೆ. ಆದರೂ ಮಹೇಶ್ ಶೆಟ್ಟಿ ತಿಮರೋಡಿ ಉದ್ದೇಶಪೂರ್ವಕವಾಗಿ ಕೇವಲ ಬಿಜೆಪಿ ಮುಖಂಡರ ತೇಜೋವಧೆಗೈಯುವ ಮೂಲಕ ಹೋರಾಟದ ದಿಕ್ಕು ತಪ್ಪಿಸಲು ಹೊರಟಿರುವುದು ವಿಷಾದನೀಯ. ರಾಜಕೀಯ ತೆವಲಿಗೆ ಜೋತು ಬಿದ್ದಂತಿರುವ ಮಹೇಶ್ ಶೆಟ್ಟಿ ತಿಮರೋಡಿಯ ಹೋರಾಟದ ಕಾಂಟ್ರಾಕ್ಟ್ ಪ್ರಾಯಶಃ ಮುಂದಿನ ಚುನಾವಣೆಗೆ ಮುಗಿಯಲಿದೆ ಎಂದು ಭಾಸವಾಗುತ್ತಿದೆ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.