ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವಾಚರಣೆ: ಕೋಟದಲ್ಲಿ ರಾಜ್ಯಪಾಲರಿಂದ ಉದ್ಘಾಟನೆ
ಉಡುಪಿ, ಅ.2: ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಹಾಗೂ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಇವರ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19ನೇ ವರ್ಷದ ಸಂಭ್ರಮ ಅಕ್ಟೋಬರ್ 3ರಿಂದ 10ರವರೆಗೆ ಕೋಟ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯಲಿದೆ.
ಅ.3ರ ಮಂಗಳವಾರ ಬೆಳಗ್ಗೆ 10:30ಕ್ಕೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು, ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು, ಹಿರಿಯ ಜನಪ್ರತಿನಿಧಿಗಳು, ಗಣ್ಯರು ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್, ಡಾ.ಕೆ.ಶಿವರಾಮ ಕಾರಂತ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಮತ್ತಿತರರು ಭಾಗವಹಿಸಲಿದ್ದಾರೆ.
ಒಂದು ವಾರದ ಈ ಸಂಭ್ರಮಾಚರಣೆಯಲ್ಲಿ ರಾಜ್ಯಮಟ್ಟದ ಚಲನಚಿತ್ರ ಉತ್ಸವ, ಸಂವಾದ, ಮಾತುಕತೆ ಹಾಗೂ ಕಾರಂತರ ವಿವಿಧ ಮುಖಗಳ ದರ್ಶನದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಅಂತಿಮ ದಿನವಾದ ಅ.10ರಂದು 19ನೇ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 4:00ಗಂಟೆಗೆ ನಡೆಯಲಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾನೂನು ಹಾಗೂ ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಭಾಗವಹಿಸಲಿದ್ದಾರೆ. ನಾಡಿನ ಖ್ಯಾತ ಸಂಗೀತ ಕಾರ, ದಾಸರ ಪದ ಗಾಯಕ ಡಾ.ವಿದ್ಯಾಭೂಷಣ್ ಅವರಿಗೆ ಈ ಬಾರಿಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.