ಬೈಂದೂರು ಶಾಸಕರಿಂದ ಜನರನ್ನು ದಿಕ್ಕು ತಪ್ಪಿಸುವ ನಾಟಕ: ಕಿಶನ್ ಹೆಗ್ಡೆ ಆರೋಪ
ಬೈಂದೂರು, ಆ.13: ಶಾಸಕರಿಗೆ ಕನಿಷ್ಟ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಜ್ಞಾನ ಹಾಗೂ ಅಗತ್ಯ ಕಾನೂನಿನ ಅರಿವಿಲ್ಲದೆ ಪ್ರಚಾರದ ಅಮಲಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ನಾಟಕವನ್ನು ಬೈಂದೂರು ಶಾಸಕ ಗುರುರಾಜ ಗಂಟಿ ಹೊಳೆ ನಿಲ್ಲಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಹೇಳಿದರು.
ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಧರಣಿ ಮತ್ತು ಕಾಂಗ್ರೆಸ್ ಪಕ್ಷ ಶಾಸಕರ ಅಧಿಕಾರವನ್ನು ಕಸಿಯುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಸಂವಿಧಾನದಲ್ಲಿ ಶಾಸಕರಿಗೆ ಕೆ.ಡಿ.ಪಿ ಸಭೆ ಹೊರತುಪಡಿಸಿದರೆ ಬೇರೆ ಯಾವ ಸಭೆ ನಡೆಸಲು ಅಧಿಕಾರ ಇದೆ ಎಂದು ತಿಳಿದುಕೊಳ್ಳಬೇಕು. ಅದರಲ್ಲೂ ಸರಕಾರಿ ಅಧಿಕಾರಿಗಳನ್ನು ಸಭೆಗೆ ಕರೆಯಬೇಕಾದರೆ ಅದಕ್ಕೆ ನಿಯಮಗಳಿವೆ. ನೋಟಿಸ್ ನೀಡುವ ಜೊತೆಗೆ ಕಡತ ನಿರ್ವಹಣೆ ಕೂಡ ಅಗತ್ಯ. ಆದರೆ ಯಾವುದೇ ನಿಯಮ ಪಾಲಿಸದೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಖಾಸಗಿ ಕಚೇರಿಯಲ್ಲಿ ಅಧಿಕಾರಿಗಳನ್ನು ಕರೆದು ಸಭೆ ನಡೆಸುವ ಅಧಿಕಾರ ಸಂವಿಧಾನದಲ್ಲಿಲ್ಲ ಎನ್ನುವ ಸಾಮಾನ್ಯ ಜ್ಞಾನ ಶಾಸಕರಿಗಿಲ್ಲದಿರುವುದು ಆಶ್ಚರ್ಯ ತಂದಿದೆ. ಇಂತಹ ನಾಟಕಗಳ ಮೂಲಕ ಜನರನ್ನು ಮರಳು ಮಾಡುವುದು ಬಿಜೆಪಿ ಪಕ್ಷಕ್ಕೆ ಕರಗತವಾಗಿದೆ. ಸಾದ್ಯವಾದರೆ ವಾರಾಹಿ ಬಲದಂಡೆ ಕುರಿತು ಧರಣಿ ನಡೆಸಲಿ. ಕೃಷಿಕರ, ಬಡವರ ಪರ ಇರುವ ಯೋಜನೆಗಳ ಅನುಷ್ಟಾನಕ್ಕೆ ಧರಣಿ ನಡೆಸಿ ಜನರ ವಿಶ್ವಾಸಗಳಿಸಲಿ. ಶಾಸಕರು ಇಂತಹ ಗೊಂದಲ ಸೃಷ್ಟಿಸುವ ಪ್ರಯತ್ನ ನಿಲ್ಲಿಸಲಿ ಎಂದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಮಾತನಾಡಿ ಬೈಂದೂರು ಶಾಸಕರು ಸಾಂವಿಧಾನಿಕ ನಿಯಮ ತಿಳಿಯದೆ ಕಾರ್ಯಾಂಗದ ಎದುರು ಧರಣಿ ಕುಳಿತಿರುವುದು ಅವರ ಅನುಭವದ ಕೊರತೆಯನ್ನು ತೋರಿಸುತ್ತಿದೆ. ಮಾಜಿ ಶಾಸಕರ ಬಗ್ಗೆ ಆರೋಪಿಸುವ ನೈತಿಕತೆ ಅವರಿಗಿಲ್ಲ. ಮಾಜಿ ಶಾಸಕರು ಭ್ರಷ್ಟಾಚಾರ ಅಥವಾ ವರ್ಗಾವಣೆ ದಂಧೆ ಮಾಡಿ ದ್ದಾರೆ ಎನ್ನುವ ಆರೋಪ ಮಾಡುವ ಬಿಜೆಪಿ ಶಾಸಕರು ದಾಖಲೆ ಕೊಟ್ಟು ಮಾತಾಡಲಿ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಾಬು ಶೆಟ್ಟಿ, ಶಂಕರ ಪೂಜಾರಿ, ನಾಗರಾಜ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಸದಾಶಿವ ಡಿ.ಪಡುವರಿ, ನಾಗರಾಜ ಗಾಣಿಗ, ಮಾಜಿ ಜಿಪಂ ಸದಸ್ಯೆ ಗೌರಿ ದೇವಾಡಿಗ, ಮದನ್ ಕುಮಾರ್ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.