ಈಸೀಲೈಫ್ ಸಂಸ್ಥೆಯ ಸೊತ್ತು ಕಳವು ಪ್ರಕರಣ: ಆರೋಪಿ ಬಂಧನ
ಉಡುಪಿ: ಕೆಲವು ದಿನಗಳ ಹಿಂದೆ ಉಡುಪಿ ನಗರದ ಕರಾವಳಿ ಬೈಪಾಸ್ ಬಳಿ ಇರುವ ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಯಂತ್ರಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮದ ಯಲ್ಲಪ್ಪಮಲ್ಲಪ್ಪ ಬೋವಿ(37) ಬಂಧಿತ ಆರೋಪಿ. ಈಸೀ ಲೈಫ್ ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯಲ್ಲಿ ಚಾಲಕರಾಗಿದ್ದ ಯಲ್ಲಪ್ಪ ಬೋವಿ ತೀರ್ಥಹಳ್ಳಿಯಲ್ಲಿರುವ ಶಾಖೆಯಿಂದ ನಾಲ್ಕು ಬಗೆಯ ಯಂತ್ರಗಳನ್ನು ವಾಹನದಲ್ಲಿ ತುಂಬಿಕೊಂಡು ಉಡುಪಿ ಶಾಖೆಯ ಎದುರು ಆ.4ರಂದು ರಾತ್ರಿ ನಿಲ್ಲಿಸಿದ್ದು, ಮರುದಿನ ಅದರಲ್ಲಿದ್ದ 6 ಲಕ್ಷ ರೂ. ಮೌಲ್ಯದ ಯಂತ್ರಗಳು ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ನಗರ ಠಾಣಾ ಎಸ್ಸೈ ಈರಣ್ಣ ಶಿರಗುಂಪಿ ಮತ್ತು ಸಿಬ್ಬಂದಿ ಆನಂದ, ಶಿವಕುಮಾರ್ ತಂಡ ಆರೋಪಿ ಯಲ್ಲಪ್ಪ ಮಲ್ಲಪ್ಪ ಬೋವಿಯನ್ನು ಆ.17ರಂದು ಬಂಧಿಸಿ, ಕಳವು ಮಾಡಿ ಆದಿಉಡುಪಿ ಎಪಿಎಂಸಿ ಗೋಧಾಮು ಕಟ್ಟಡಗಳ ಸಂದಿನಲ್ಲಿ ಬಚ್ಚಿಟ್ಟಿದ್ದ ಸೊತ್ತನ್ನು ವಶಕ್ಕೆ ಪಡೆದುಕೊಂಡಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.