ಕಾನೂನು ದುರುಪಯೋಗವಾಗದಂತೆ ನೋಡಿಕೊಳ್ಳಿ: ನ್ಯಾ.ಶರ್ಮಿಳಾ
ಉಡುಪಿ, ಜು.18: ಕಾನೂನು, ಸಂವಿಧಾನ ಹಾಗೂ ಕಾರ್ಯದರ್ಶಿಗಳ ದುರುಪಯೋಗವಾಗಬಾರದು. ಇದಕ್ಕಾಗಿ ಅರಿವಿನ ಅಗತ್ಯದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜಿನ ಸಮಾಜಕಾರ್ಯ ವೇದಿಕೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ನಡೆದ ಜನಸಾಮಾನ್ಯರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಬಹುತೇಕ ಪ್ರಕರಣಗಳಲ್ಲಿ ಕಾನೂನು ದುರುಪಯೋಗವಾಗುತ್ತಿದೆ. ಮಾತ್ರವಲ್ಲದೆ ಅಮಾಯಕರು ಆರೋಪಿಗಳಾಗುತ್ತಿದ್ದಾರೆ. ಆದುದರಿಂದ ಕಾನೂನು ಗಳನ್ನು ಇಂದಿನ ಯುವ ಜನತೆ ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಸಾಮಾಜಿಕ ಅರಿವನ್ನು ಮೂಡಿಸುವ ಅಗತ್ಯವಿದೆ ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜೇಶ ಪಡುಬಿದ್ರಿ ಪೋಕ್ಸೋ ಕಾಯಿದೆಯ ಕುರಿತು ಮಾಹಿತಿಗಳನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವಿಭಾಗ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ಡಾ. ರಾಘವ ನಾಯ್ಕ, ತಿಮ್ಮಣ್ಣ ಜಿ. ಭಟ್ ಉಪಸ್ಥಿತರಿದ್ದರು.
ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಡಾ. ಪ್ರಮೀಳಾ ಜೆ. ವಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಥಮ ಎಂ.ಎಸ್.ಡಬ್ಲ್ಯೂ. ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.