ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಭ್ರಷ್ಟಾಚಾರ ಹಗರಣ: 11ನೇ ದಿನ ಪೂರ್ಣಗೊಳಿಸಿದ ರೈತರ ಅಹೋರಾತ್ರಿ ಧರಣಿ

ಬ್ರಹ್ಮಾವರ: ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ 14 ಕೋಟಿ ರೂ.ಗಳಿಗೂ ಅಧಿಕ ವಂಚನೆ ಹಾಗೂ ಭ್ರಷ್ಟಾಚಾರದ ತನಿಖೆಯಲ್ಲಾಗುತ್ತಿರುವ ಅನಗತ್ಯವಿಳಂಬ ನೀತಿಯನ್ನು ಖಂಡಿಸಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ‘ಅನ್ನದಾತರ ಅಹೋರಾತ್ರಿ ಧರಣಿ ಸತ್ಯಾಗ್ರಹ’ ಇಂದು 11ನೇ ದಿನವನ್ನು ಪೂರ್ಣಗೊಳಿಸಿದೆ.
ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಬೈಕಾಡಿ ಗ್ರಾಮದಲ್ಲಿ ಮುಚ್ಚಿರುವ ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಎದುರು ಕಳೆದ ಫೆ.22ರಂದು ಪ್ರಾರಂಭಗೊಂಡ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಇಂದು ಜಿಲ್ಲಾ ರೈತ ಸಂಘದ ಹೆಬ್ರಿ ವಲಯದ ನೇತೃತ್ವದಲ್ಲಿ ನಡೆಯಿತು.
ಮಾ.2ರಂದು ರಾಜ್ಯ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಉಡುಪಿ ಜಿಲ್ಲಾ ಪ್ರವಾಸದ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರೊಂದಿಗೆ ಮಾತನಾಡಿ, ನ್ಯಾಯ ದೊರಕಿಸಿಕೊಡುವ ವಾಗ್ದಾನ ದೊಂದಿಗೆ ಸತ್ಯಾಗ್ರಹವನ್ನು ಹಿಂದೆಗೆಯುವ ಮನವಿ ಮಾಡಿದ್ದರೂ, ಸರಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ಧರಣಿಯಿಂದ ಹಿಂದೆ ಸರಿಯದಿರುವ ತನ್ನ ನಿಲುವಿನಂತೆ ಅನ್ನದಾತರ ಪ್ರತಿಭಟನೆ ಮುಂದುವರಿದಿದೆ.
ಇಂದಿನ ಸತ್ಯಾಗ್ರಹದಲ್ಲಿ ಹೆಬ್ರಿ ವಲಯದ ರೈತ ಮುಖಂಡರಾದ ಮಂಜುನಾಥ ಪೂಜಾರಿ, ಮಹೇಶ್ ಶೆಟ್ಟಿ ಬೆಳಂಜೆ, ಕಿರಣ್ ತೋಳಾರ್ ಕಚ್ಚೂರು, ರೋಶನ್ ಕುಮಾರ್ ಶೆಟ್ಟಿ, ನವೀನ್ ಅಡ್ಯಂತಾಯ, ವಿಜಯ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೈಕಾಡಿ, ಅಶೋಕ್ ಶೆಟ್ಟಿ ಚೊರಾಡಿ, ಭುಜಂಗ ಶೆಟ್ಟಿ, ಭೋಜ ಕುಲಾಲ್, ಶರತ್‌ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರಿಗೆ ನಿಯೋಗ:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಆಹ್ವಾನದಂತೆ ರೈತ ಸಂಘದ ಮುಖಂಡರ ನಿಯೋಗವೊಂದು ಮಾ.8ರಂದು ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದೆ. ನಾಲ್ಕೈದು ಮಂದಿ ರೈತ ಮುಖಂಡರ ನಿಯೋಗ ಬೆಂಗಳೂರಿಗೆ ಬಂದರೆ, ಅಲ್ಲಿ ಗೃಹ ಸಚಿವರು, ಸಹಕಾರ ಸಚಿವರೊಂದಿಗೆ ಮಾತುಕತೆಗೆ ವ್ಯವಸ್ಥೆ ಮಾಡುವುದಾಗಿ ಡಿಕೆಶಿ ತಿಳಿಸಿದ್ದರು.
ಮಾ.6ಕ್ಕೆ ಪರಿಷತ್‌ನಲ್ಲಿ ಚರ್ಚೆಗೆ ಮನವಿ
ಈ ನಡುವೆ ಬ್ರಹ್ಮಾವರದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ 14 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ಹಾಗೂ ಈ ಬಗ್ಗೆ ತನಿಖೆಯಲ್ಲಿ ಆಗುತ್ತಿರುವ ವಿಳಂಬದ ಕುರಿತಂತೆ ವಿಧಾನಪರಿಷತ್‌ನಲ್ಲಿ ಮಾ.6ರಂದು ಚರ್ಚೆಗೆ ನಿಯಮ 72ರಡಿಯಲ್ಲಿ ಅವಕಾಶ ಕಲ್ಪಿಸುವಂತೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸಭಾಪತಿಗಳಿಗೆ ಮನವಿ ಮಾಡಿದ್ದಾರೆ.
ಇದೊಂದು ಗಂಭೀರ ವಿಚಾರವಾಗಿರುವುದರಿಂದ ಮಾ.6ರಂದು ನಿಯಮ 72ರಡಿಯಲ್ಲಿ ಚರ್ಚಿಸಲು ಕಾರ್ಯಕಲಾಪ ಪಟ್ಟಿಯಲ್ಲಿ ಸೇರಿಸಿ ಅವಕಾಶ ಕಲ್ಪಿಸುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ.