ಮಲ್ಪೆ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: 8 ಮಂದಿ ಮೀನುಗಾರರ ರಕ್ಷಣೆ
ಮಲ್ಪೆ, ಡಿ.22: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಡಿ.19ರಂದು ಬೆಳಗ್ಗೆ ಆಳ ಸಮುದ್ರದಲ್ಲಿ ಮುಳುಗಡೆಗೊಂಡಿದ್ದು, ಇದರಲ್ಲಿದ್ದ ಒಟ್ಟು ಎಂಟು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಕಡೆಕಾರು ರಕ್ಷಾ ಎಂಬವರಿಗೆ ಸೇರಿದ ‘ಶ್ರೀ ನಾರಾಯಣ’ ಬೋಟು ಡಿ.12ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಡಿ.19ರಂದು ಬೆಳಗ್ಗೆ 6-30ರ ಸುಮಾರಿಗೆ ಬಂದರಿನಿಂದ 26 ಮಾರು ಆಳ ದೂರದಲ್ಲಿ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ವಸ್ತೊಂದು ಬೋಟಿಗೆ ಬಡಿಯಿತ್ತೆನ್ನಲಾಗಿದೆ.
ಇದರಿಂದ ಬೋಟಿಗೆ ಹಾನಿಯಾಗಿ ನೀರು ಬೋಟಿನ ಒಳ ನುಗ್ಗಲು ಆರಂಭಿಸಿತು. ತಕ್ಷಣ ವಯರ್‌ಲೆಸ್ ಮೂಲಕ ಇತರ ಬೋಟಿನವರಿಗೆ ಸಂದೇಶ ರವಾನಿಸಿದರು. ಈ ವೇಳೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶ್ರೀಮೂಕಾಂಬಿಕ ಅನುಗ್ರಹ ಬೋಟಿನವನರು ಧಾವಿಸಿ ಬಂದು ಬೋಟನ್ನು ಮೇಲೆಳೆಯಲು ಪ್ರಯತ್ನಿಸಿದರು.
ಆದರೆ ನೀರಿನ ಅಬ್ಬರ ಹೆಚ್ಚಾದ ಪರಿಣಾಮ ನೀರು ಬೋಟಿನ ಒಳಗೆ ಬರುವುದನ್ನು ತಡೆಯಲು ಸಾಧ್ಯವಾಗಿಲ್ಲ. ಸುಮಾರು 8 ಗಂಟೆ ವೇಳೆಗೆ ಬೋಟು ಪೂರ್ಣ ಮುಳುಗಡೆಗೊಂಡಿತು. ಮೀನುಗಾರರನ್ನು ಮೂಕಾಂಬಿಕ ಬೋಟಿನವರು ರಕ್ಷಣೆ ಮಾಡಿ ಮಲ್ಪೆ ಬಂದರಿನ ದಡಕ್ಕೆ ಕರೆ ತಂದಿದ್ದಾರೆ. ಇದರಿಂದ ಸುಮಾರು 18 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.