ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ: ಕಾಂಗ್ರೆಸ್
ಉಡುಪಿ, ಜು.28: ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜೊಂದರಲ್ಲಿ ನಡೆದ ವೀಡಿಯೋ ಪ್ರಕರಣವನ್ನು ಇಲ್ಲಿನ ಬಿಜೆಪಿ ನಾಯಕರು ವಿಕೃತಗೊಳಿಸಿ ಮುಗ್ದ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದು ವಿಷಾದನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಮಣಿಪುರದಲ್ಲಿ ತನ್ನದೇ ಪಕ್ಷದ ಸರಕಾರದ ಮೂಗಿನಡಿಯಲ್ಲಿ ಇಡೀ ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದ ಮಹಿಳೆಯರ ನಗ್ನ ಮೆರವಣಿಗೆಯ ವಿಕೃತ ಘಟನೆಯ ಬಗ್ಗೆ ಚಕಾರವೆತ್ತದ ಬಿಜೆಪಿ ನಾಯಕರು ಇದೀಗ ಜನರ ಮನಸ್ಸನ್ನು ಬೇರೆಡೆಗೊಯ್ಯಲು ವೀಡಿಯೋ ಪ್ರಕರಣವನ್ನು ರಾಷ್ಟ್ರ ಮಟ್ಟದ ಸುದ್ದಿಯನ್ನಾಗಿ ಬಿಂಬಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಪ್ರಕರಣವನ್ನು ಹಿಜಾಬ್, ಹಲಾಲ್ ಮೊದಲಾದ ತಮ್ಮ ಕೋಮು ಸಂಘರ್ಷದ ಕಾರ್ಯಸೂಚಿಯ ಅಡಿಯಲ್ಲಿ ತಂದು ಮತ್ತೆ ಈ ನಾಡಿನ ಕೋಮು ಸೌಹಾರ್ದ ಕೆಡಿಸಲು ನೋಡುತ್ತಿರುವುದು ಯಾವುದೇ ರಾಜಕೀಯ ಪಕ್ಷಕ್ಕೆ ಭೂಷಣ ತರುವ ವಿಷಯವಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಪೊಲೀಸರು ಈ ಘಟನೆಯ ಹಿಂದಿನ ಮಿಥ್ಯೆಯನ್ನ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಆಪಾದನೆ ಬರಿಯ ಆಪಾದನೆಯಾಗಿ ಉಳಿಯಬಾರದು. ಈ ಬಗ್ಗೆ ಹೆಚ್ವಿನ ತನಿಖೆ ನಡೆಸಿ ಸಂತ್ರಸ್ತೆ ಮತ್ತು ಆಪಾದಿತೆಯರಿಗೆ ನ್ಯಾಯ ಸಿಗುವಂತಾಗಬೇಕು. ಕರಾವಳಿ ಮತ್ತೆ ಕೋಮು ಸಂಘರ್ಷದ ಗೊಂದಲದ ಗೂಡಾಗ ದಂತೆ ನೋಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯ ಪ್ರವೃತ್ತವಾಗಲಿದೆ ಎಂದು ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.