ಉಡುಪಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ ನಕ್ಸಲರ ಹೆಜ್ಜೆ ಗುರುತುಗಳು
ಸಾಂದರ್ಭಿಕ ಚಿತ್ರ
ಉಡುಪಿ : 2002ರಲ್ಲಿ ಕೊಪ್ಪ ತಾಲೂಕಿನ ಮೆಣಸಿನಹಾಡ್ಯದಲ್ಲಿ ನಕ್ಸಲರ ಮೊದಲ ಹೆಜ್ಜೆ ಗುರುತುಗಳು ಕಾಣಿಸಿಕೊಂಡ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯೂ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಒಂದಾಗಿ ರಾಜ್ಯ ಭೂಪಟದಲ್ಲಿ ಗುರುತಿಸಿಕೊಂಡಿದೆ. ಪಶ್ಚಿಮ ಘಟ್ಟದ ದಟ್ಟ ಹಸಿರಿನ ಕಾನನದ ನಡುವೆ ಕೆಂಪು ನೆತ್ತರಿನ ಕಲೆಗಳು ಕಾಣಿಸಿಕೊಳ್ಳಲಾರಂಭಿಸಿ ಈಗಾಗಲೇ 22 ವರ್ಷಗಳು ಸಂದಿವೆ.
ಇದುವರೆಗೆ ನಕ್ಸಲ್ ಸಂಬಂಧಿ ಚಟುವಟಿಕೆ ಹಾಗೂ ನಕ್ಸಲರು ಮತ್ತು ಪೊಲೀಸರು-ಎಎನ್ಎಫ್ ಮುಖಾಮುಖಿಯಲ್ಲಿ ಒಟ್ಟು 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 12 ಮಂದಿ ನಕ್ಸಲರು, 9 ಮಂದಿ ನಾಗರಿಕರು ಹಾಗೂ ಮೂವರು ಪೊಲೀಸರು ಸೇರಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಹಾಗೂ ಪಶ್ಚಿಮಘಟ್ಟ ಪಸರಿಸಿರುವ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಕ್ಸಲ್ ಮತ್ತು ಪೊಲೀಸರ ನಡುವಿನ ಮುಖಾಮುಖಿಯ ಕೆಲವು ಅಧ್ಯಾಯಗಳು ಈ ಕೆಳಗಿನಂತಿವೆ.
2002 ನವೆಂಬರ್ 6: ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ದಟ್ಟಅರಣ್ಯ ಪ್ರದೇಶದಲ್ಲಿ ತರಬೇತಿ ನಿರತರಾಗಿದ್ದ ನಕ್ಸಲರ ಬಂದೂಕಿನಿಂದ ಸಿಡಿದ ಗುಂಡು ಕಾಡಿಗೆ ಬಂದಿದ್ದ ಅದೇ ಗ್ರಾಮದ ವೃದ್ಧೆ ಚೀರಮ್ಮನ ಕಾಲಿಗೆ ತಾಗಿ ಆಕೆ ಗಾಯಗೊಂಡಾಗ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ನಕ್ಸಲೀಯರ ಚಟುವಟಿಕೆಗಳು ಮೊದಲ ಬಾರಿ ಹೊರಜಗತ್ತಿಗೆ ಗೊತ್ತಾಯಿತು.
2003 ಆ.6: ಕುದುರೆಮುಖ ಸಮೀಪದ ಸಿಂಗ್ಲಾರ ಎಂಬಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ಮೊದಲ ಬಾರಿ ಗುಂಡಿನ ಚಕಮಕಿ.
2003 ನವೆಂಬರ್ 17: ಮುಂಜಾನೆ ಕಾರ್ಕಳ ತಾಲೂಕು ಈದುವಿನ ಬಲ್ಯೊಟ್ಟುನಲ್ಲಿ ಮೊದಲ ಬಾರಿ ಪೊಲೀಸ್ ಮತ್ತು ನಕ್ಸಲರ ನಡುವಿನ ಮುಖಾಮುಖಿಯಲ್ಲಿ ಪಾರ್ವತಿ ಮತ್ತು ಹಾಜಿಮಾ ಎಂಬ ಶಂಕಿತ ನಕ್ಸಲ್ ಯುವತಿಯರು ಪೊಲೀಸರ ಗುಂಡಿಗೆ ಬಲಿಯಾದರು.
2003 ಡಿಸೆಂಬರ್ 29: ಶೃಂಗೇರಿ ತಾಲೂಕಿನ ನೆಮಾರು ಅರಣ್ಯ ಪ್ರವಾಸಿ ಮಂದಿರಕ್ಕೆ ನಕ್ಸಲರು ಬೆಂಕಿ ಹಚ್ಚಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿದರು.
2004 ಅಕ್ಟೋಬರ್ 7: ಶೃಂಗೇರಿ ತಾಲೂಕು ಕಿಗ್ಗ ಬಳಿಯ ಮಗಬೈಲು ಎಂಬಲ್ಲಿ ಚಂದ್ರಶೇಖರ ಮನೆಯಲ್ಲಿ ಕಾವಲಿಗಿದ್ದ ಪೊಲೀಸ್ ಕಾನ್ಸ್ಟೇಬಲ್ ಮುದ್ದಪ್ಪರನ್ನು ಅಪಹರಿಸಿ, ಅವರ ಎಸ್ಎಲ್ಆರ್ ಬಂದೂಕು ಕಸಿದುಕೊಂಡು ಬಿಡುಗಡೆ ಮಾಡಿದರು.
2004 ಅಕ್ಟೋಬರ್21:ಪೊಲೀಸರ ಮಾಹಿತಿದಾರನೆಂಬ ಸಂಶಯದ ಮೇಲೆ ನಕ್ಸಲರು ಬುಕಡಿಬೈಲಿನ ಸಮೀಪದ ಹೆಮ್ಮಿಗೆಯ ಕೃಷಿಕ ಚಂದ್ರಕಾಂತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎಚ್ಚರಿಕೆ ನೀಡಿದ್ದರು.
2005 ಜನವರಿ 29: ಶೃಂಗೇರಿ ತಾಲೂಕಿನ ಕಿಗ್ಗ ಸಮೀಪದ ಅರಣ್ಯ ಇಲಾಖೆ ಶಿಕಾರಿ ನಿಗ್ರಹ ದಳ ಬಿಡಾರದ ಮೇಲೆ ನಕ್ಸಲರಿಂದ ದಾಳಿ, ಬಿಡಾರ ದ್ವಂಸ.
2005 ಫೆ.6: ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಬಲಿಗೆಗುಡ್ಡದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಪೊಲೀಸರ ಗುಂಡಿಗೆ ನಕ್ಸಲ್ ಮುಖಂಡ ಸಾಕೇತರಾಜನ್ ಹಾಗೂ ಆತನ ಸಹಚರ ಶಿವಲಿಂಗು ಬಲಿ.
2005 ಮೇ 17: ಪೊಲೀಸರ ಮಾಹಿತಿದಾರನಾಗಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ನಕ್ಸಲರಿಂದ ಮೆಣಸಿನಹಾಡ್ಯದ ಗಿರಿಜನ ಮುಖಂಡ ಶೇಷಯ್ಯರ ಅಮಾನುಷ ಹತ್ಯೆ.
2005 ಜೂನ್ 23: ಕುಂದಾಪುರ ತಾಲೂಕು ಹಳ್ಳಿಹೊಳೆ ಸಮೀಪದ ದೇವರಬಾಳು ಎಂಬಲ್ಲಿ ನಡೆದ ಎನ್ಕೌಂಟರ್ನಲ್ಲಿ ಪೊಲೀಸರ ಗುಂಡಿಗೆ ಬೆಳಗಾವಿಯ ಅಜಿತ್ ಕುಸುಬಿ ಮತ್ತು ಉಮೇಶ್ ಬಣಕಲ್ ಎಂಬ ನಕ್ಸಲ್ ಯುವಕರು ಬಲಿ. ಇದಕ್ಕೆ ಪ್ರತಿಯಾಗಿ ನಕ್ಸಲರು ಹೆಬ್ರಿ ಬಳಿಯ ಮತ್ತಾವು ಎಂಬಲ್ಲಿ ಪೊಲೀಸರ ಜೀಪಿನ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಿ 7 ಮಂದಿ ಪೊಲೀಸರನ್ನು ಗಾಯಗೊಳಿಸಿದರು.
2006 ಆ.23: ಶೃಂಗೇರಿಯ ಕೆರೆಕಟ್ಟೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಚೇರಿ ಮೇಲೆ ನಕ್ಸಲ್ ದಾಳಿ. ಕೆಲದಿನದ ಬಳಿಕ ಕಾರ್ಕಳ ಮುನಿಯಾಲು ಮುಟ್ಲುಪಾಡಿಯಲ್ಲಿ ಸದಾನಂದ ಶೆಟ್ಟಿ ಅವರ ಬೈಕ್ ಗೆ ಬೆಂಕಿ ಇಟ್ಟು ನಕ್ಸಲರಿಂದ ಬೆದರಿಕೆ.
2006 ಡಿಸೆಂಬರ್ 25: ಶೃಂಗೇರಿ ಬಳಿಯ ಕಿಗ್ಗದಲ್ಲಿ ನಕ್ಸಲ್ ದಿನಕರ ಎನ್ಕೌಂಟರ್ ಗೆ ಬಲಿ.
2007 ಮಾ.13: ಶಂಕಿತ ನಕ್ಸಲ ಯುವತಿ ಚೆನ್ನಮ್ಮ ಅಮಾಸೆಬೈಲಿನಲ್ಲಿ ಸೆರೆ.
2007 ಜೂ.3: ಶೃಂಗೇರಿ ಕಿಗ್ಗ ಸಮೀಪ ಗುಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲೀಕ ವೆಂಕಟೇಶ ಹತ್ಯೆ. ಜೂ.7: ಆಗುಂಬೆ ತಲ್ಲೂರಂಗಡಿ ಬಳಿ ಕೆಎಸ್ಆರ್ಟಿಸಿ ಬಸ್ ಗೆ ಬೆಂಕಿ.
2007 ಜು.10: ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಒಡೆಯರಮಠದಲ್ಲಿ ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ಯುವಕ ಸಿಂಧನೂರಿನ ಗೌತಮ್, ರಾ.ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ, ಕಾರ್ಮಿಕ ಸುಂದರೇಶ್, ಮನೆಯ ಯಜಮಾನರಾದ ರಾಮೇಗೌಡ್ಲು, ಕಾವೇರಿ ಬಲಿ.
2007 ಜು.17: ಆಗುಂಬೆ ಸಮೀಪದ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿ, ಎಸ್ಐ ವೆಂಕಟೇಶ ಹತ್ಯೆ.
2008 ಮೇ15: ಹೆಬ್ರಿ ಸಮೀಪದ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಬಲಿ.
2008 ಜು.7: ಬೆಳ್ತಂಗಡಿ ತಾಲೂಕಿನ ಕುತ್ಲೂರು ಹಾಗೂ ಕಾರ್ಕಳದ ತಿಂಗಳಮಕ್ಕಿಯಲ್ಲಿ ನಕ್ಸಲರ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ.
2008 ನವೆಂಬರ್13: ಶಿವಮೊಗ್ಗದಲ್ಲಿ ಶಂಕಿತ ನಕ್ಸಲ್ ಜನಾರ್ದನ ಬಂಧನ, ನಕ್ಸಲರು ಬಚ್ಚಿಟ್ಟ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕ ವಶ.
2008 ನವೆಂಬರ 20: ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್ಕೌಂಟರ್. ನಕ್ಸಲರಾದ ಸೊರಬದ ಮನೋಹರ್, ಸಹಚರರಾದ ನವೀನ್, ಅಭಿಲಾಷ್ ಹತ್ಯೆ, ಪೇದೆ ಗುರುಪ್ರಸಾದ್ ಸಾವು.
2008 ಡಿ.7: ಹಳ್ಳಿಹೊಳೆ ಸಮೀಪದ ಕೃಷಿಕ ಜಮೀನ್ದಾರ ಕೇಶವ ಯಡಿಯಾಳರನ್ನು ಪೊಲೀಸರ ಮಾಹಿತಿದಾರನೆಂಬ ಆರೋಪದಲ್ಲಿ ಮನೆಗೆ ನುಗ್ಗಿ ನಕ್ಸಲರು ಹತ್ಯೆಗೈದರು.
2009 ಆ.22: ಕಿಗ್ಗ ಎನ್ಕೌಂಟರ್, ಎರಡು ದಿನಗಳ ಬಳಿಕ ಶೃಂಗೇರಿಯ ನೆಮ್ಮಾರಿನ ದಿಂಡೋಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೊಲೀಸರ ವಶ.
2010 ಮಾ.1: ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿ ಎಂಬಲ್ಲಿ ಪೊಲೀಸರ ಎನ್ಕೌಂಟರ್ ಗೆ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಯಾನೆ ಆನಂದ ಹತ್ಯೆ.
2011 ಅ.9: ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ನಾವೂರ ಗ್ರಾಮದ ಮಂಜಲದಲ್ಲಿ ಬೆಳಗಿನ ಜಾವ ನಕ್ಸಲ್ ನಿಗ್ರಹದಳದ ಪೊಲೀಸರ ಗನ್ ಮಿಸ್ ಫೈರ್ ಆಗಿ ಎಎನ್ಎಫ್ ಸಿಬ್ಬಂದಿ ಮಹಾದೇವ ಮಾನೆ ಬಲಿ.
2011 ಡಿ.19: ಹೆಬ್ರಿ ಕಬ್ಬಿನಾಲೆ ಸಮೀಪದ ತಿಂಗಳ ಮಕ್ಕಿಯ ಸದಾಶಿವ ಗೌಡ (49) ತೆಂಗಿನಮಾರು ಮನೆಯಿಂದ ನಾಪತ್ತೆ, 22ರಂದು ವಿಷಯ ಬಹಿರಂಗ. ಶಂಕಿತ ನಕ್ಸಲ್ ವಿಶ್ವನಿಂದ ಪತ್ರಕರ್ತರಿಗೆ ಮಾಹಿತಿ.
2011 ಡಿ.28: ತೆಂಗಿನಮಾರುವಿನಿಂದ ಎರಡು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ಸದಾಶಿವ ಗೌಡನ ಶವ ಕೈಕಾಲು ಕಟ್ಟಿ ಸ್ಥಿತಿಯಲ್ಲಿ ಗೋಳಿಮರದಡಿ ಪತ್ತೆ. ನಕ್ಸಲರ ಬರಹವೂ ಸಮೀಪದಲ್ಲಿ ದೊರಕಿತ್ತು.
2024 ನ.18: ಕಾರ್ಕಳ ತಾಲೂಕಿನ ಹೆಬ್ರಿಯ ಪೀತಬೈಲುವಿನಲ್ಲಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ