ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಹಾಸ ಸುವರ್ಣ ನಿಧನ
ಕಾರ್ಕಳ, ಜು.30: ಕಾರ್ಕಳ ಪುರಸಭಾ ಮಾಜಿ ಅಧ್ಯಕ್ಷ, ಶಿರ್ಡಿ ಸಾಯಿ ಮಂದಿರ, ಶಿರ್ಡಿ ಸಾಯಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಚಂದ್ರಹಾಸ ಸುವರ್ಣ (68) ಹೃದಯಾಘಾತದಿಂದ ರವಿವಾರ ನಿಧನರಾಗಿದ್ದರು.
ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ನಾಟಕ, ಸಿನೆಮಾ ರಂಗದಲ್ಲಿ ಸಕ್ರಿಯರಾಗಿದ್ದ ಚಂದ್ರಹಾಸ ಸುವರ್ಣರು ಲಯನ್ಸ್, ಜೇಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಶಿರ್ಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರರಾಗಿ, ಶಿರ್ಡಿ ಸಾಯಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕಾರ್ಕಳದಲ್ಲಿ ಕಲಾ ರಂಗ ಎಂಬ ಸಂಸ್ಥೆ ಸ್ಥಾಪಿಸಿ ನಾಟಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಅವರು ಹಲವಾರು ಕನ್ನಡ ತುಳು ಚಿತ್ರದಲ್ಲಿ ನಟಿಸಿದ್ದಾರೆ
ಜೆಡಿಎಸ್ ಪಕ್ಷ ದಿಂದ ಬಂಗ್ಲೆಗುಡ್ಡೆ ಕಜೆ ವಾರ್ಡಿನ ಪುರಸಭಾ ಸದಸ್ಯರಾಗಿ ಆಯ್ಕೆಯಾದ ಇವರು ಕಾಂಗ್ರೆಸ್ ಪಕ್ಷದಿಂದ ಪುರಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷ ಸೇರಿದಂತೆ ಹಲವು ಪಕ್ಷದಲ್ಲೂ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ರವಿವಾರ ಅರಾಹ್ನ 2:30ಕ್ಕೆ ಪೆರುವಾಜೆಯಲ್ಲಿನ ಸ್ವ ಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ
ಸಂತಾಪ: ಇವರ ನಿಧನಕ್ಕೆ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಉದಯ ಕುಮಾರ್ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಿ.ಆರ್.ರಾಜು, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿರ್ದೇಶಕ, ನಟ ಕುಮಾರ್ ಕಟೀಲ್, ಕಾರ್ಕಳ ಪುರಸಭಾ ಮಾಜಿ ಅಧ್ಯಕ್ಷರುಗಳಾದ ಸುಬಿತ್ ಎನ್. ಆರ್., ಪ್ರತಿಮಾ ರಾಣೆ, ನಳಿನಿ ಆಚಾರ್, ಸೀತಾರಾಮ್, ರಹ್ಮತ್ ಎನ್. ಶೇಖ್, ಬಿಲ್ಲವ ಯುವ ಸೇನೆ ಅಧ್ಯಕ್ಷ ಹರೀಶ್ ಸಚರೀಪೇಟೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.