ಹೂಡಿಕೆ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಆ.18: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ 34.80 ಲ.ರೂ. ಪಡೆದು ವಂಚಿಸಿದ ಘಟನೆಯ ಬಗ್ಗೆ ಮಂಗಳೂರು ಸೆನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.1ರಂದು ಇನ್‌ಸ್ಟಾಗ್ರಾಂನಲ್ಲಿ ಷೇರು ವ್ಯಾಪಾರ ಕಂಪೆನಿಯ ಬಗ್ಗೆ ಇದ್ದ ಲಿಂಕ್‌ನ್ನು ನೋಡಿ ಅದರ ಮೂಲಕ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡಿದ್ದೆ. ಬಳಿಕ ಅದರಲ್ಲಿ ಕಸ್ಟಮರ್ ಸರ್ವೀಸ್‌ನ ಚಾಟ್ ಬಾಕ್ಸ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಷೇರು ಮಾರುಕಟ್ಟೆಯ ಬಗ್ಗೆ ತಿಳಿಸಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದೆಂದು ಪ್ರೆರೇಪಿಸಿದ್ದರು. ಅದನ್ನು ನಂಬಿದ ತಾನು ಜು.1ರಿಂದ ಆ.12ರವರೆಗೆ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಯು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ 34,80,000 ರೂ. ವರ್ಗಾಯಿಸಿದ್ದೆ. ಕೆಲವು ದಿನದ ಬಳಿಕ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಮುಂದಾದಾಗ ಅಪರಿಚಿತ ವ್ಯಕ್ತಿಗಳು ಶೇ.20 ರಷ್ಟು ತೆರಿಗೆ ಪಾವತಿಸುವಂತೆ ತಿಳಿಸಿದರು. ಆದರೆ ತಾನು ಹಣವನ್ನು ವಾಪಸ್ ಪಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆವಾಗ ತಾನು ಮೋಸ ಹೋಗಿರುವುದು ಗೊತ್ತಾಯಿತು ಎಂದು ದೂರುದಾರರು ತಿಳಿಸಿದ್ದಾರೆ.