ಸೆ.10ರಿಂದ ಉಚಿತ ಸೇನಾ ತರಬೇತಿ ಶಿಬಿರ ‘ಅಗ್ನಿಸೇತು’
File Photo
ಉಡುಪಿ, ಸೆ.6: ಟೀಮ್ ನೇಶನ್ ಫಸ್ಟ್ ವತಿಯಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನ ಸಹಯೋಗದೊಂದಿಗೆ ಭಾರತೀಯ ರಕ್ಷಣಾ ಪಡೆಗಳಿಗೆ ಸೇರಲು ಇಚ್ಛಿಸುತ್ತಿರುವ ಯುವಕ/ಯುವತಿ ಯರಿಗೆ ಉಚಿತ ತರಬೇತಿ ಶಿಬಿರ ಅಗ್ನಿಸೇತು 2023ನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ರಘುಪತಿ ಭಟ್, ಶಿಬಿರವು ಸೆ.10ರಂದು ಸೆ.29ರವರೆಗೆ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ರಾಜ್ಯಾದ್ಯಂತ 700ಕ್ಕೂ ಅಧಿಕ ಕರೆಗಳು ಬಂದಿದ್ದು, 280 ಮಂದಿ ನೋಂದಾವಣಿ ಮಾಡಿ ಕೊಂಡಿದ್ದಾರೆ. ಇದರಲ್ಲಿ ಅಂತಿಮವಾಗಿ 100-125 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದರು.
ಶಿಬಿರದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. 20 ದಿನಗಳ ಶಿಬಿರಕ್ಕೆ ಸುಮಾರು 15ಲಕ್ಷ ರೂ. ಖರ್ಚು ಆಗಲಿದೆ. ಹೆಚ್ಚಿನ ವಿವರಗಳಿಗೆ ಸೂರಜ್ ಕಿದಿಯೂರು(ಮೊ-7353308181) ಹಾಗೂ ಪಿ.ಬಿ.ರಂಗನಾಥ್ (ಮೊ-9535981582) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಈ ಪ್ರಯುಕ್ತ ಡ್ರಗ್ಸ್ ವಿರೋಧಿ ಅಭಿಯಾನವಾಗಿ ನಶಾ ಮುಕ್ತ ಉಡುಪಿ ದೌಡ್ ಓಟವನ್ನು ಸೆ.29ರಂದು ಮಾಹೆ ಕ್ಯಾಂಪಸ್ ನಿಂದ ಮಲ್ಪೆ ಬೀಚ್ವರೆಗೆ ಆಯೋಜಿಸಲಾಗಿದೆ. ಇದರಲ್ಲಿ 1000ಕ್ಕೂ ಅಧಿಕ ಓಟಗಾರರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹೆ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಟೀಮ್ ನೇಶನ್ ಫಸ್ಟ್ ಅಧ್ಯಕ್ಷ ಸೂರಜ್ ಕಿದಿ ಯೂರು, ಕಾರ್ಯದರ್ಶಿ ಸಾತ್ವಿಕ್ ಗಡಿಯಾರ್, ಜತೆ ಕಾರ್ಯದರ್ಶಿ ಸೂರಜ್ ಬನ್ನಂಜೆ ಉಪಸ್ಥಿತರಿದ್ದರು.