ಗಂಗೊಳ್ಳಿ: ಕಲ್ಲು ಕೋರೆಗೆ ಬಿದ್ದು ಗಾಯಗೊಂಡಿದ್ದ ಯುವಕ ಅನುಮಾನಾಸ್ಪದವಾಗಿ ಮೃತ್ಯು; ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಗಂಗೊಳ್ಳಿ, ಜ.30: ಆಲೂರು ಗ್ರಾಮದ ಮುಂಡುಗೋಡಿನಲ್ಲಿರುವ ಕೆಂಪು ಕಲ್ಲು ಕೋರೆಯ ಹೊಂಡಕ್ಕೆ ಬಿದ್ದು ಯುವಕನೋರ್ವ ಮೃತಪಟ್ಟಿದ್ದು, ಈ ಸಾವಿನ ಕುರಿತು ಸಂಶಯ ಇರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಸುನೀಲ್ ಗಟ್ಟಿ(22) ಎಂದು ಗುರುತಿಸಲಾಗಿದೆ. ಜ.27ರಂದು ಸಂಜೆ 7.15ರ ಸುಮಾರಿಗೆ ಸುನೀಲ್ ಕೆಂಪು ಕಲ್ಲು ಕೋರೆಯ ಹೊಂಡಕ್ಕೆ ಬಿದ್ದು ಗಾಯಗೊಂಡಿರುವುದಾಗಿ ಬಸಪ್ಪ ಎಂಬವರು ನೀಡಿದ ಮಾಹಿತಿಯಂತೆ ವಿಜಯಪುರ ಮೂಲದ ಹನುಮಂತರಾಯ ಸ್ಥಳಕ್ಕೆ ಬಂದಿದ್ದು, ಅಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುನೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರ ಸ್ಥಿತಿಯಲ್ಲಿದ್ದ ಸುನೀಲ್ ಜ.29ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತ ಸುನೀಲ್ ಅವರ ಮರಣದ ಬಗ್ಗೆ ಸಂಶಯ ಇರುವುದಾಗಿ ಹನುಮಂತರಾಯ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story