ಗಂಗೊಳ್ಳಿ ಅಗ್ನಿ ದುರಂತ; ಗರಿಷ್ಠ ಪರಿಹಾರಕ್ಕೆ ಪ್ರಯತ್ನ: ಸಚಿವ ಮಂಕಾಳ ವೈದ್ಯ
ಕುಂದಾಪುರ, ನ.13: ಗಂಗೊಳ್ಳಿ ಬೋಟು ಅಗ್ನಿ ದುರಂತಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಸರಕಾರದಿಂದ ಗರಿಷ್ಠ ಮೊತ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗು ವುದು ಎಂದು ರಾಜ್ಯದ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದ್ದಾರೆ.
ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಕಷ್ಟದ ಪರಿಸ್ಥಿತಿ ಯಲ್ಲಿ ಮೀನುಗಾರರ ಸಹಾಯ ಸಹಕಾರಕ್ಕೆ ಇಲಾಖೆ, ಸರಕಾರ ನಿಲ್ಲುತ್ತದೆ. ಅವರಿಗೆ ಸಮಾಧಾನ ಮಾಡಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡ ಲಾಗುತ್ತದೆ ಎಂದರು.
ಇಲ್ಲಿನ ಪರಿಸ್ಥಿತಿ ನೋಡಿ ಬಹಳ ಬೇಸರವಾಗುತ್ತಿದೆ. ಮೀನುಗಾರರ ಕಷ್ಟವನ್ನು ನಾನು ಅರಿತಿದ್ದೇನೆ. ಹೀಗಾಗಿ ಘಟನೆ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದೇನೆ. ರಾಜ್ಯ ಸರಕಾರದಿಂದ ಏನು ಸಾಧ್ಯವಾಗುತ್ತದೆ ಹಾಗೂ ನೊಂದ ಮೀನುಗಾರರಿಗೆ ಹೆಚ್ಚಿನ ಮೊತ್ತವನ್ನು ಕೊಡಲು ಪ್ರಯತ್ನ ಮಾಡುತ್ತೇನೆ. ಸದ್ಯಕ್ಕೆ ಯಾವುದೇ ಘೋಷಣೆ ಮಾಡುವುದಿಲ್ಲ ಎಂದು ಅವರು ಹೇಳಿದರು.
ಸಚಿವರು ಘಟನೆ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭ ದಲ್ಲಿ ಬಂದರು ಇಲಾಖೆ ಅಧಿಕಾರಿ ಗೌಸ್ ಅಲಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್., ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ಮೀನುಗಾರ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.
ದುರಂತದ ಬಗ್ಗೆ ಪ್ರತ್ಯೇಕ ತನಿಖೆ: ವೈದ್ಯ
‘ಘಟನೆ ಬಗ್ಗೆ ಪೊಲೀಸ್ ಮತ್ತು ಮೀನುಗಾರಿಕೆ ಇಲಾಖೆ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಸಾವಿರಾರು ಕೋಟಿ ಆಸ್ತಿ ಬಂದರು ಪ್ರದೇಶಗಳಲ್ಲಿ ಇರುವುದರಿಂದ ಬಂದರಿನಲ್ಲಿ ಇಲಾಖೆ ಅಥವಾ ವಿಮಾ ಕಂಪೆನಿ ಮೂಲಕ ಪಂಪ್ ಹೌಸ್ ನಿರ್ಮಾಣದ ಯೋಚನೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.
ಬಂದರು ಪ್ರದೇಶವನ್ನು ಮೀನುಗಾರಿಕೆ ಮತ್ತು ಬಂದರು ಇಲಾಖೆ ನೋಡಿಕೊಳ್ಳಬೇಕಾಗಿದೆ. ಪಂಚಾಯತ್‌ಗೆ ಇದರಲ್ಲಿ ಯಾವುದೇ ಆದಾಯ ಇಲ್ಲ. ಪಂಚಾಯತ್ ವಸೂಲಿ ಮಾಡುತ್ತಿದ್ದರೆ ಅವರೇ ಹೊಣೆಗಾರರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.