ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಅರಸು ಕೊಡುಗೆ ದೊಡ್ಡದು: ಡಿ.ಟಿ.ಪ್ರಭು
ಡಿ.ದೇವರಾಜ ಅರಸು ಜನ್ಮದಿನಾಚರಣೆ
ಉಡುಪಿ: ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ಡಿ. ದೇವರಾಜ ಅರಸು. ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಇವರ ಕೊಡುಗೆ ಅತೀ ದೊಡ್ಡದು. ಅದೇ ರೀತಿ ದೇಶದಲ್ಲಿ ಮೊದಲ ಬಾರಿಗೆ ಭೂ ಸುಧಾರಣೆ ಕಾಯ್ದೆಯನ್ನು ಯಶಸ್ವಿ ಯಾಗಿ ಜಾರಿಗೊಳಿಸುವ ಮೂಲಕ ಉಳುವವನೇ ಭೂ ಒಡೆಯ ಕಾನೂನಿನ ಸಫಲತೆಗೆ ಶ್ರಮಿಸಿದ್ದರು ಎಂದು ಉಡುಪಿ ಜಿಲ್ಲೆ ಉಪ ಪೊಲೀಸ್ ಅಧೀಕ್ಷಕ ಡಿ.ಟಿ ಪ್ರಭು ಹೇಳಿದ್ದಾರೆ.
ನಗರದ ಮಿಷನ್ ಕಂಪೌಂಡ್‌ನ ಬಳಿಯ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗಳ ಸಂಯುಕ್ತ ಆಶ್ರಯ ದಲ್ಲಿ ಇಂದು ನಡೆದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಪರಿವರ್ತನೆಯ ಹರಿಕಾರ, ರಾಜ್ಯದ ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸುರವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿ ಮಾತನಾಡುತಿದ್ದರು.
ರಾಜ್ಯದಲ್ಲಿ ಮಲಹೊರುವ ಪದ್ಧತಿ ನಿಷೇಧ ಅವರ ಮತ್ತೊಂದು ಗಣನೀಯ ಸಾಧನೆ. ಇದರೊಂದಿಗೆ ಪೌರ ಕಾರ್ಮಿಕರಿಗೆ ಪೌರಾಡಳಿತ ಸಂಸ್ಥೆಗಳಲ್ಲಿ ಖಾಯಂ ಹುದ್ದೆಗಳನ್ನು ನೀಡುವ ಕೆಲಸವನ್ನೂ ಅವರು ಮಾಡಿದ್ದರು. ಕೇಂದ್ರದ ಆಗಿನ 20 ಅಂಶಗಳ ಕಾರ್ಯಕ್ರಮ ಸೇರಿದಂತೆ ನೂರಾರು ಕಾಯ್ದೆಗಳನ್ನು ಅವರು ಅನುಷ್ಠಾನಗೊಳಿಸಿದ್ದರು ಎಂದರು.
ಪದವಿ ಹೊಂದಿದ ನಿರುದ್ಯೋಗಿ ಯುವಜನತೆಗೆ ಸ್ಟೈಫಂಡ್ ಅನ್ನು ದೇಶದಲ್ಲಿಯೇ ಪ್ರಥಮವಾಗಿ ನೀಡಿದವರು ಅರಸು. ಬಳಿಕ ಇದನ್ನು ಅನೇಕ ರಾಜ್ಯಗಳು ಜಾರಿಗೆ ತಂದಿದ್ದು ಗಮನಾರ್ಹ. ಈ ರೀತಿ ಹಲವು ಜನೋಪಯೋಗಿ ಕೆಲಸ ಮಾಡಿದ ಅಪರೂಪದ ಜನಸೇವಕರಾಗಿದ್ದ ಅರಸು, ಇದೇ ಕಾರಣದಿಂದ ಇಂದಿಗೂ ಸಹ ಜನಮನದಲ್ಲಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಯಶಪಾಲ್ ಎ. ಸುವರ್ಣ, ರಾಜ್ಯ ಕಂಡ ಅನುಭವಿ, ಪ್ರಾಮಾಣಿಕ ರಾಜಕಾರಣಿ ಡಿ. ದೇವರಾಜ ಅರಸು. ಹಿಂದುಳಿದ ವರ್ಗಗಳ ಏಳಿಗೆಗೆ ಧ್ವನಿಯಾಗಿ ರಾಜ್ಯದಲ್ಲಿ ಮಹತ್ವದ ಬದಲಾವಣೆಗೆ ಕಾರಣೀಭೂತರಾದವರು. ಅವರ ವಿಚಾರಧಾರೆ ಗಳನ್ನು ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮೂಲಭೂತ ಸೌಕರ್ಯ ಸೇರಿದಂತೆ ಹಾಸ್ಟೆಲ್‌ಗಳ ನಿರ್ಮಾಣ, ಮೀಸಲಾತಿ ನಿಯಮಗಳ ಮೂಲಕ ಹಿಂದುಳಿದ ವರ್ಗಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಉಳುವವನೆ ಹೊಲದೊಡೆಯ ಕಾರ್ಯಕ್ರಮದ ಮೂಲಕ ರೈತರ ಬದುಕಿಗೆ ಆಶಾಕಿರಣವಾದವರು. ಹೀಗೆ ರಾಷ್ಟ್ರ ಕಂಡ ಮಹಾನ್ ಮುತ್ಸದ್ದಿ ರಾಜಕಾರಣಿ ಗಳಲ್ಲಿ ಅರಸು ಅಗ್ರಗಣ್ಯರು ಎಂದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಪೌರಾಯುಕ್ತ ರಾಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಉಡುಪಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಡಿ.ದೇವರಾಜ ಅರಸು ಪ್ರಶಸ್ತಿ ವಿಜೇತ ಮಲ್ಪೆ ರಾಘವೇಂದ್ರ, ವಿವಿಧ ಹಿಂದುಳಿದ ವರ್ಗಗಳ ಸಂಘಟನೆಗಳ ಪದಾಧಿಕಾರಿಗಳು, ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್ ಲಮಾಣಿ ಸ್ವಾಗತಿಸಿ, ಉಡುಪಿ ತಾಲೂಕು ವಿಸ್ತರಣಾಧಿಕಾರಿ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಇಲಾಖೆಯ ಲೆಕ್ಕ ಅಧೀಕ್ಷಕಿ ಸುಗುಣ ವಂದಿಸಿದರು.