ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
ಕಾರ್ಕಳ: ಪದವಿ ಎಂಬುದು ಶಿಕ್ಷಣದ ಅಂತಿಮ ಹಂತವಲ್ಲ. ಜೀವನದಲ್ಲಿ ಕಾಣಬಹುದಾದ ವಿವಿಧ ಬಗೆಯ ಕಲಿಕೆ ಹಾಗೂ ಅನುಭವಗಳ ಆರಂಭಿಕ ಹಂತವಾಗಿದೆ. ಸತ್ಯವನ್ನೇ ಮಾತನಾಡಿ ಸತ್ಯಪರತೆಯಿಂದ ನಡೆದರೆ ನಿಮ್ಮ ಜೀವನದ ಸರ್ವ ತೋಮುಖ ಅಭಿವೃದ್ಧಿ ಸಾಧ್ಯ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ.ಇ ರಂಗಸ್ವಾಮಿ ಅಭಿಪ್ರಾಯಪಟ್ಟರು.
ಆ. 24 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 2023-2024 ನೇ ಶೈಕ್ಷಣಿಕ ಸಾಲಿನ ಪದವಿಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 'ಭಾರತ ತನ್ನ ಆಹಾರ, ರಕ್ಷಣಾ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸ್ವಾವಲಂಬನೆಗೆ ಮಹತ್ವ ನೀಡುತ್ತಿದೆ. ಸರ್ಕಾರವು ಸ್ವದೇಶಿ ಉತ್ಪಾದನೆ, ತಂತ್ರಜ್ಞಾನಾಭಿವೃದ್ಧಿ ಮತ್ತು ಆರೋಗ್ಯ ಸೇವೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಹ್ಯುಮನ್ ಡೆವಲ್ಪ್ಮೆಂಟ್ ಇಂಡೆಕ್ಸ್ ಅಭಿವೃದ್ದಿಗೆ ನಾವು ಶ್ರಮಿಸಿದರೆ ದೇಶದ ಏಳಿಗೆ ಸಾಧ್ಯ' ಎಂದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಟೆಕ್ನಿಕಲ್ ಎಜುಕೇಶನ್ ವಿಭಾಗದ ವೈಸ್-ಪ್ರೆಸಿಡೆಂಟ್ ಡಾ| ಗೋಪಾಲ್ ಮುಗೆರಾಯ ಅವರು ಮಾತನಾಡಿ 'ಕರಾವಳಿ ಜನರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಪಾತ್ರ ಮಹತ್ವದ್ದು. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕ ಪ್ರಯತ್ನ ಹಾಗೂ ಆದರ್ಶಪ್ರಾಯರಾದ ವ್ಯಕ್ತಿಯನ್ನು ನಾವು ಕಾಣಬಹುದು. ತಮ್ಮ ವೈಯಕ್ತಿಕ ಏಳಿಗೆಯಿಂದ ಹಲವರ ಏಳಿಗೆಗೆ ಸಹಾಯವಾಗುವಂತೆ ಮಾಡಬೇಕು' ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ. ಎನ್ ವಿನಯ ಹೆಗ್ಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶೈಕ್ಷಣಿಕ ಸಾಧನೆಗೈದ 18 ವಿದ್ಯಾರ್ಥಿಗಳನ್ನು ಚಿನ್ನ ಮತ್ತು ಬೆಳ್ಳಿಯ ಪದಕ ನೀಡುವ ಮೂಲಕ ಗುರುತಿಸಲಾಯಿತು. ಬಿ.ಇ ವಿದ್ಯಾರ್ಥಿಗಳಿಗೆ ಪದವಿಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಸಲಹೆಗಾರ ಪ್ರೊ.ಗೋಪಿನಾಥ್, ನಿಟ್ಟೆ ವಿಶ್ವವಿದ್ಯಾಲಯದ ಕರಿಕುಲಮ್ ಡೆವಲಪ್ಮೆಂಟ್ ನ ನಿರ್ದೇಶಕ ಡಾ| ನಾಗೇಶ್ ಪ್ರಭು, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಉಪಕುಲಸಚಿವೆ ಡಾ|ರೇಖಾ ಭಂಡಾರ್ಕರ್, ಉಪ ಪರೀಕ್ಷಾ ನಿಯಂತ್ರಕ ಡಾ|ಸುಬ್ರಹ್ಮಣ್ಯ ಭಟ್, ನಿಟ್ಟೆ ತಾಂತ್ರಿಕ ಕಾಲೇಜಿನ ಇಂಡಸ್ಟ್ರೀ ಇನ್ಶ್ಟಿಟ್ಯೂಟ್ ಇಂಟರಾಕ್ಷನ್‌ನ ನಿರ್ದೇಶಕ ಡಾ|ಪರಮೇಶ್ವರನ್, ಸ್ಟೂಡೆಂಟ್ ವೆಲ್ಫೇರ್, ಎಟ್ಮಿಶನ್, ಆರ್&ಡಿ ಡೀನ್ ಗಳು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ|ಶ್ರೀನಿವಾಸ್ ರಾವ್ ಬಿ.ಆರ್ ಪದವಿಪ್ರದಾನ ಸಮಾರಂಭದ ಮೆರವಣಿಗೆಯನ್ನು ಮುನ್ನಡೆಸಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|ನಿರಂಜನ್ ಎನ್ ಚಿಪ್ಳೂಣ್ಕರ್ ವಾರ್ಷಿಕ ವರದಿಯನ್ನು ವಾಚಿಸು ವುದರೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ|ಐ.ಆರ್ ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕಗಳಿಸಿದ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು. ಸಹಾಯಕ ಪರೀಕ್ಷಾ ನಿಯಂತ್ರಕ ಡಾ| ವೆಂಕಟೇಶ್ ಕಾಮತ್ ವಂದಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಶಶಾಂಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.