ಗೃಹಲಕ್ಷ್ಮೀ ಯೋಜನೆ: ಉಡುಪಿ ಜಿಲ್ಲೆಯಲ್ಲಿ 2.08 ಲಕ್ಷ ಫಲಾನುಭವಿಗಳಿಂದ ನೋಂದಣಿ
ಉಡುಪಿ, ಆ.29: ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಧೇಯ್ಯದೊಂದಿಗೆ ಕುಟುಂಬದ ಯಜಮಾನಿ ಮಹಿಳೆ ಖಾತೆಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
ಈ ಯೋಜನೆ ನೋಂದಣಿಗೆ ಜುಲೈ 19ರಂದು ಚಾಲನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2,56,850 ಕುಟುಂಬದ ಯಜಮಾನಿಯೆಂದು ನಮೂದಾಗಿರುವ ಪಡಿತರ ಚೀಟಿ ಇದ್ದು, ಇವರಲ್ಲಿ ಆಗಸ್ಟ್ 28ರವರೆಗೆ ಒಟ್ಟು 2,08,695 ಫಲಾನುಭವಿಗಳು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ.81.25ರಷ್ಟು ಸಾಧನೆಯಾಗಿದೆ.
ನಾಳೆ ಮೈಸೂರಿನಲ್ಲಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಆ.30ರಂದೇ ನಗದು ಸೌಲಭ್ಯವನ್ನು ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದೆ. ರಾಜ್ಯದ ಎಲ್ಲಾ ಫಲಾನುಭವಿಗಳು ಮೈಸೂರಿನ ಈ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಲು ಸಾಧ್ಯವಾಗುವಂತೆ ಏಕಕಾಲದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರತಿ ವಾರ್ಡ್ಗಳಲ್ಲಿ ಹಾಗೂ ಪ್ರತಿ ಗ್ರಾಮ ಪಂಚಾಯತ್ಗಳಲ್ಲಿ ಸ್ಥಳೀಯವಾಗಿ ಕಾರ್ಯಕ್ರಮ ವನ್ನು ಆಯೋಜಿಸಲಾಗುತ್ತದೆ.
ಜಿಲ್ಲೆಯ 155 ಗ್ರಾಮ ಪಂಚಾಯತ್ಗಳ ಕೇಂದ್ರ ಸ್ಥಾನದಲ್ಲಿ ಹಾಗೂ ಪ್ರತಿ ನಗರ ಸ್ಥಳೀಯ ಸಂಸ್ಥೆಯ 52 ವಾರ್ಡ್ಗಳಲ್ಲಿ ಹಾಗೂ 6 ತಾಲೂಕು ಕೇಂದ್ರಗಳಲ್ಲಿ ಮತ್ತು ಒಂದು ಜಿಲ್ಲಾ ಕೇಂದ್ರದಲ್ಲಿ ಸೇರಿದಂತೆ ಒಟ್ಟು 214 ಸ್ಥಳಗಳಲ್ಲಿ ಏಕಕಾಲದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಆಗಿರುವ ಬಗ್ಗೆ ಏಕಕಾಲದಲ್ಲಿ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಿ, ಮಂಜೂರಾತಿ ಪತ್ರ ಗೃಹಲಕ್ಷ್ಮಿ ಗುರುತಿನ ಚೀಟಿ ವಿತರಿಸಲಾಗುವುದು.
ಮೈಸೂರು ಕಾರ್ಯಕ್ರಮದ ಸ್ಥಳದಿಂದ ವಂಡ್ಸೆ ಗ್ರಾಮ ಪಂಚಾಯತ್ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯ ಯುಬಿಎಂಸಿ ಸಭಾಂಗಣದಲ್ಲಿ ಫಲಾನುಭವಿಗಳೊಂದಿಗೆ ಪರಸ್ಪರ ಸಂವಾದ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಉಡುಪಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ನಗರದ ಕಿನ್ನಿಮೂಲ್ಕಿ ಮಿಷನ್ ಕಂಪೌಂಡ್ನ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಆಗಸ್ಟ್ 30ರಂದು ಅಪರಾಹ್ನ 12 ಗಂಟೆಗೆ ಚಾಲನೆ ನೀಡಲಾಗುವುದು.
ಫಲಾನುಭವಿಗಳು ತಮ್ಮ ಮನೆಗಳ ಮುಂದೆ ಹಾಗೂ ಗೃಹಲಕ್ಷ್ಮೀ ನಡೆಯುವ ಸ್ಥಳಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ರಂಗೋಲಿ ಬಿಡಿಸಿ, ‘ನಾ ಗೃಹಲಕ್ಷ್ಮೀ ನಾ ನಾಯಕಿ’ ಹಾಗೂ ‘ಗೃಹಲಕ್ಷ್ಮೀ’ ಲೋಗೋವನ್ನು ಚಿತ್ರಿಸಬಹುದು. ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫಲಾನುಭವಿ ಗಳು ಹಾಗೂ ರಂಗೋಲಿ ಬಗ್ಗೆ ಮೂರು ನಿಮಿಷಗಳ ವೀಡಿಯೋ ಸಿದ್ಧಪಡಿಸಿ, ಗೃಹಲಕ್ಷ್ಮೀ ಯೂಟ್ಯೂಬ್ ಚಾನೆಲ್ಗೆ ಅಪ್ಲೋಡ್ ಮಾಡಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯು ಸರಕಾರದ ಸ್ತ್ರೀ ಸ್ವಾವಲಂಬನೆಯತ್ತ ಒಂದು ದಿಟ್ಟ ಹೆಜ್ಜೆಯಾಗಿದ್ದು, ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಅನ್ನು ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಪಾವತಿಸಲಾಗುತ್ತದೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ಫಲಾನುಭವಿಗಳು, ಗಣ್ಯರು, ಸಾರ್ವಜನಿಕರು ತಮ್ಮ ವಾರ್ಡ್ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.