ಗೃಹಲಕ್ಷ್ಮೀ ಯೋಜನೆ: ಉಡುಪಿ ಜಿಲ್ಲೆಯ 214 ಸ್ಥಳಗಳಲ್ಲಿ ಏಕಕಾಲಕ್ಕೆ ಉದ್ಘಾಟನೆ
ಉಡುಪಿ, ಆ.30: ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಧೇಯ್ಯದೊಂದಿಗೆ ಕುಟುಂಬದ ಯಜಮಾನಿ ಮಹಿಳೆ ಖಾತೆಗೆ ಪ್ರತಿ ತಿಂಗಳು 2000 ರೂ. ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ದೂರಿ ಯಾಗಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಚಾಲನೆ ದೊರಕಿ ದ್ದರೆ, ಉಡುಪಿ ಜಿಲ್ಲೆಯಲ್ಲೂ 214 ಸ್ಥಳಗಳಲ್ಲಿ ಏಕಕಾಲದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಮಟ್ಟದ ಪ್ರಧಾನ ಕಾರ್ಯಕ್ರಮ ಮಿಷನ್ ಕಾಂಪೌಂಡ್‌ನ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿಯಂ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರಸನ್ನ ಎಚ್., ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಅಮೃತಾ ಕೃಷ್ಣಮೂರ್ತಿ, ಕೃಷ್ಣರಾವ್ ಕೊಡಂಚ, ವಿಜಯ ಪೂಜಾರಿ, ವಿವಿಧ ಪಕ್ಷಗಳ ನಾಯಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಸಾದ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ದಿನಕರ ಹೇರೂರು ಹಾಗೂ ಇತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ರಜ್ಯ ಸರಕಾರ ಜಾರಿಗೆ ತಂದಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
ಇಂದು ಜಿಲ್ಲೆಯ 155 ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ, ಪ್ರತಿ ನಗರ ಸ್ಥಳೀಯ ಸಂಸ್ಥೆಗಳ 52 ವಾರ್ಡ್‌ಗಳಲ್ಲಿ, ಆರು ತಾಲೂಕು ಕೇಂದ್ರಗಳಲ್ಲಿ ಹಾಗೂ ಒಂದು ಜಿಲ್ಲಾ ಕೇಂದ್ರ ಸೇರಿದಂತೆ ಒಟ್ಟು 214 ಸ್ಥಳಗಳಲ್ಲಿ ಏಕಕಾಲದಲ್ಲಿ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮನೆಗಳ ಮುಂದೆ ರಂಗೋಲಿ: ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳಿಗೆ ಅವರವರ ಖಾತೆಗೆ ನಗದು ವರ್ಗಾವಣೆ ಆಗಿರುವ ಬಗ್ಗೆ ಏಕಕಾಲದಲ್ಲಿ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುವ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ತಿಂಗಳು 2000ರೂ. ಅನ್ನು ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಪಾವತಿಸಲಾಗುತ್ತಿದೆ.
ಯೋಜನೆಯ ಫಲಾನುಭವಿಗಳು ತಮ್ಮ ಮನೆಯ ಮುಂದೆ ಹಾಗೂ ಗೃಹಲಕ್ಷ್ಮೀ ಉದ್ಘಾಟನೆ ನಡೆಯುವ ಸ್ಥಳಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ರಂಗೋಲಿ ಬಿಡಿಸಿ ‘ನಾ ಗೃಹಲಕ್ಷ್ಮಿ ನಾ ನಾಯಕಿ’ ಬರೆದು ಗೃಹಲಕ್ಷ್ಮೀ ಲೋಗೊ ಚಿತ್ರಿಸಿದ್ದರು.
ಜಿಲ್ಲೆಯಲ್ಲಿ 2,09,235 ಕುಟುಂಬ: ಈ ಯೋಜನೆ ನೋಂದಣಿಗೆ ಜುಲೈ 19ರಂದು ಚಾಲನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2,56,850 ಕುಟುಂಬದ ಯಜಮಾನಿಯೆಂದು ನಮೂದಾಗಿರುವ ಪಡಿತರ ಚೀಟಿ ಇದ್ದು, ಇವರಲ್ಲಿ ಆಗಸ್ಟ್ 29ರವರೆಗೆ ಒಟ್ಟು 2,09,235 ಫಲಾನುಭವಿಗಳು ಈ ಯೋಜನೆಗೆ ನೋಂದಾಯಿಸಿ ಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ.81.46ರಷ್ಟು ಸಾಧನೆಯಾಗಿದೆ.