ಆ.5-7ರವರೆಗೆ ಉಡುಪಿಯಲ್ಲಿ ‘ಕೈಮಗ್ಗ ಸೀರೆಗಳ ಉತ್ಸವ’
ಉಡುಪಿ, ಜು.31: ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಆಶ್ರಯದಲ್ಲಿ ಮತ್ತು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ಉಡುಪಿ, ತಾಳಿಪಾಡಿ, ಶಿವಳ್ಳಿ, ಬ್ರಹ್ಮಾವರ, ಪಡುಪಣಂಬೂರು, ಮಂಗಳೂರು, ಬಸ್ರೂರು ಮತ್ತು ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ‘ಕೈಮಗ್ಗ ಸೀರೆಗಳ ಉತ್ಸವ’ ಕಾರ್ಯಕ್ರಮವನ್ನು ಆ.5ರಿಂದ 7ರವರೆಗೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಆ.5ರಂದು ಅಪರಾಹ್ನ 2.30 ಗಂಟೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 3 ದಿನಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರು ವರು. ಬಳಿಕ ‘ಕೈಮಗ್ಗದ ನೇಯ್ಗೆ ಅಂದು-ಇಂದು-ಮುಂದು’ ವಿಚಾರಸಂಕಿರಣ ನಡೆಯಲಿದೆ. ಕೈಮಗ್ಗ ನೇಕಾರಿಕೆಯ ಭವಿಷ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಚಿಂತನ ಮಂಥನ ನಡೆಯಲಿದೆ ಎಂದು ತಿಳಿಸಿದರು.
ಈ ವಿಚಾರ ಸಂಕಿರಣದಲ್ಲಿ ಪದ್ಮಶಾಲಿ ಕೂಡುಕಟ್ಟಿನ 16 ದೇವಸ್ಥಾನಗಳ ಅಧ್ಯಕ್ಷರು ಮತ್ತು ಮೊಕ್ತೇಸರರು ಹಾಗೂ ಕರಾವಳಿಯ ಎಂಟು ಪ್ರಾಥಮಿಕ ನೇಕಾರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೆ ಸಮುದಾಯದ ಗಣ್ಯರುಗಳು ಸೇರಿ ಸುಮಾರು 300ಕ್ಕೂ ಹೆಚ್ಚು ವಿಶೇಷ ಆಹ್ವಾನಿತರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ
ಆ.6ರಂದು ಬೆಳಗ್ಗೆ 9ಗಂಟೆಗೆ ಸಾರ್ವಜನಿಕರಿಗಾಗಿ ಉಡುಪಿ ಕೈಮಗ್ಗ ಸೀರೆಗಳ ಸೌಂದರ್ಯ ಸ್ಪರ್ಧೆ, ಮುಂದಿನ ಒಂದು ವರ್ಷಗಳ ಅವಧಿಗೆ ಉಡುಪಿ ಸೀರೆಗಳಿಗೆ 20 ಬ್ರಾಂಡ್ ಅಂಬಾಸಿಡರ್‌ಗಳ ಆಯ್ಕೆ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿರುವರು. ಆ.7ರಂದು ಬೆಳಗ್ಗೆ 9ಗಂಟೆಗೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಾರಂಭ ವನ್ನು ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ.
ಉಡುಪಿ ಮತ್ತು ದಕ ಜಿಲ್ಲೆಗಳ 8 ಸಹಕಾರಿ ಸಂಘಗಳ ತಲಾ ಒಬ್ಬ ಹಿರಿಯ ನೇಕಾರರಿಗೆ ನೇಕಾರ ಕೌಶಲ್ಯ ರತ್ನ ಪುರಸ್ಕಾರ, 50 ಆಕಾಂಕ್ಷಿಗಳಿಗೆ ಆರು ತಿಂಗಳ ಕೈಮಗ್ಗದ ತರಬೇತಿ ಕಾರ್ಯಗಾರಗಳಿಗೆ ಚಾಲನೆ, 14 ಕೈಮಗ್ಗದ ನೇಕಾರರಿಗೆ ಕಾರ್ಯಗಾರ ಕೇಂದ್ರ ನಿರ್ಮಿಸಲು 1.2 ಲಕ್ಷ ರೂಗಳ ಸಹಾಯಧನ ಹಸ್ತಾಂತರ, 27 ನೇಕಾರರಿಗೆ ತಲಾ 50,000ರೂ. ಮೌಲ್ಯದ ನೂತನ ಕೈಮಗ್ಗಗಳ ಹಸ್ತಾಂತರ ಸಹಿತ ಸುಮಾರು 80 ಲಕ್ಷ ರೂ. ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಕರ್ನಾಟಕದ ವಿವಿಧ ಭಾಗಗಳ ಕೈಮಗ್ಗದ ಸೀರೆ ಮತ್ತು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಮೂರು ದಿನಗಳ ಕಾಲ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಅಧ್ಯಕ್ಷ ಮಂಜುನಾಥ ಮಣಿಪಾಲ್, ಕಾರ್ಯದರ್ಶಿ ಅವಿನಾಶ್ ಶೆಟ್ಟಿಗಾರ್, ಪ್ರತಿಷ್ಠಾನದ ಕೋಶಾಧಿ ಕಾರಿ ಶ್ರೀನಿವಾಸ ಶೆಟ್ಟಿಗಾರ್ ಬೈಲೂರು, ಪ್ರಮುಖರಾದ ಜ್ಯೋತಿಪ್ರಸಾದ್ ಶೆಟ್ಟಿಗಾರ್, ಅಶೋಕ್ ಶೆಟ್ಟಿಗಾರ್ ಅಲೆವೂರು, ದಿನೇಶ್ ಕುಮಾರ್, ಹರೀಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.