ಆರೋಗ್ಯಕರ ಮನಸ್ಸು, ದೇಹ ಇಂದಿನ ಅತೀ ಅಗತ್ಯ: ನ್ಯಾ.ಗಂಗಣ್ಣನವರ್
ಉಡುಪಿ : ಉತ್ತಮವಾಗಿ ಕೆಲಸ ನಿರ್ವಹಿಸಲು ಆರೋಗ್ಯಕರ ಮನಸ್ಸು ಮತ್ತು ದೇಹ ಅತೀ ಅಗತ್ಯ. ಆದುದರಿಂದ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವೈದ್ಯರ ಸಲಹೆಗಳನ್ನು ಪಾಲಿಸಬೇಕು ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ್ ಎಸ್.ಗಂಗಣ್ಣನವರ್ ಹೇಳಿದ್ದಾರೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ ಹಾಗು ಉಡುಪಿ ಜಿಲ್ಲಾಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ನ್ಯಾಯಧೀಶರು, ಸಿಬ್ಬಂದಿ, ನ್ಯಾಯ ವಾದಿ ಹಾಗೂ ಕಕ್ಷಿದಾರರಿಗೆ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್ ಮಾತನಾಡಿ, ಮಧುಮೇಹ ಕಾಯಿಲೆಯಲ್ಲಿ ಉಡುಪಿ ಜಿಲ್ಲೆ ಇಡೀ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಸುಶಿಕ್ಷಿತ ಜಿಲ್ಲೆಯಾದರೂ ಇಲ್ಲಿನ ಜನ ಕುಳಿತು ತಿನ್ನುವುದು ಬಿಟ್ಟರೆ ಯಾವುದೇ ದೈಹಿಕ ಚಟುವಟಿಕೆ ನಡೆಸುತ್ತಿಲ್ಲ. ಕೋವಿಡ್ ನಂತರ ಹೆಚ್ಚಿನ ಸಂಖ್ಯೆಯ ಯುವ ಜನತೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದರ ಬಗ್ಗೆ ಸಂಶೋಧನೆ ನಡೆಸ ಲಾಗುತ್ತಿದೆ. ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ೪೫ನಿಮಿಷ ಹಾಗೂ ವಾರಕ್ಕೆ ಐದು ದಿನ ವಾಕಿಂಗ್ ಮಾಡುವುದರಿಂದ ಆರೋಗ್ಯವಂತರಾಗಿರಬಹುದು ಎಂದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಪುರುಷೋತ್ತಮ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ, ವೈದ್ಯಾಧಿಕಾರಿಗಳಾದ ಡಾ.ಸ್ವಸ್ತಿಕ್, ಡಾ.ಮಾಣಿಕ್ ಉಪಸ್ಥಿತರಿದ್ದರು. ನಟರಾಜ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.