ಮನೆಯಂಗಳದಲ್ಲಿ ಮನದುಂಬಿ ನಮನ: ಹಿರಿಯ ಪತ್ರಕರ್ತ ಕೆ.ಶಿವಶಂಕರ್‌ಗೆ ಸನ್ಮಾನ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಿಗೆ ಮನೆ ಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮದಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಸುಮಾರು 35 ವರ್ಷಗಳ ಕಾಲ ದುಡಿದು, ಹಿರಿಯ ಉಪ ಸಂಪಾದಕರಾಗಿ ನಿವೃತ್ತರಾದ ಕೆ.ಶಿವಶಂಕರ್ ಅವರನ್ನು ಅವರ ದಶರಥನಗರದ ಮನೆಯಲ್ಲಿ ಇಂದು ಸನ್ಮಾನಿಸಲಾಯಿತು.
ಕೆ.ಶಿವಶಂಕರ್ ದಂಪತಿಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಶಂಕರ್, ಎಲ್ಲರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತರಿಗೆ, ಅವರ ನೋವು, ಸಂಕಷ್ಟಗಳಿಗೆ ಯಾವುದೇ ಧ್ವನಿ ಇಲ್ಲದಂತಾಗಿದೆ ಎಂದು ಹೇಳಿದರು.
ಧರ್ಮ, ಪಕ್ಷ, ಜಾತಿ ಸೇರಿದಂತೆ ಎಲ್ಲವನ್ನು ನಿಲ್ತಿರ್ಪವಾಗಿ ನೋಡುವ ವಿಶೇಷ ಸಾಮರ್ಥ್ಯ ಪತ್ರಕರ್ತರಿಗೆ ಇದೆ. ಇದು ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಹೆಸರು, ಸಂಪತ್ತು ಸಿಗದಿದ್ದರೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಇರುವ ಪತ್ರಕರ್ತರ ವೃತ್ತಿಯನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನಿವೃತ್ತರಾದ ಬಳಿಕವೂ ಏನಾದರೂ ಬರೆದುಕೊಂಡು ಪತ್ರಕರ್ತರಾಗಿ ಮುಂದು ವರೆಯುವ ಅವಕಾಶ ಕೂಡ ನಮಗೆ ಇರುತ್ತದೆ ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಪತ್ರಕರ್ತರಾದ ಶಶಿಧರ್ ಮಾಸ್ತಿಬೈಲು, ಉಮೇಶ್ ಕುಕ್ಕುಪಲ್ಕೆ ಉಪಸ್ಥಿತರಿದ್ದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.