ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: ಸೋಮವಾರವರೆಗೆ ಆರೆಂಜ್ ಅಲರ್ಟ್
ಉಡುಪಿ, ಜು.22: ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದಲೇ ಮುಂಗಾರು ಬಿರುಸುಗೊಂಡಿದ್ದು, ನಾಳೆಯೂ ಇದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಸೋಮವಾರ ಮುಂಜಾನೆ 8:30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ನಿನ್ನೆ ಸಂಜೆಯ ನಂತರ ಬಿರುಸುಗೊಂಡ ಮಳೆ ಇಂದು ಮುಂಜಾನೆಯ ಬಳಿಕ ತೀವ್ರಗತಿಯಲ್ಲಿ ಸುರಿಯತೊಡಗಿತು. ಮಳೆಯೊಂದಿಗೆ ಆಗಾಗ ಗಾಳಿಯೂ ಜೋರಾಗಿ ಬೀಸುತ್ತಿರುವುದು ಜಿಲ್ಲೆಯಲ್ಲಿ ನೆರೆಯ ಭೀತಿಯನ್ನು ಹೆಚ್ಚಿಸಿದೆ. ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆ ಪ್ರಮಾಣ ಮತ್ತೆ ಹೆಚ್ಚಿದೆ. ಜಿಲ್ಲೆಯಾದ್ಯಂತವೂ ಮಳೆ ಏಕಪ್ರಕಾರ ಸುರಿಯುತ್ತಿದೆ.
ಮುಂದಿನ ಎರಡು ದಿನಗಳ ಕಾಲ ಮಳೆಯೊಂದಿಗೆ ಗಂಟೆಗೆ 40ರಿಂದ 45 ಕಿ.ಮೀ. ವೇಗದ ಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಮಂಗಳೂರಿನಿಂದ ಕಾರವಾರದವರೆಗಿನ ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, 3.5ಮೀ.ನಿಂದ 4ಮೀ. ಎತ್ತರದ ತೆರೆಗಳು ದಡವನ್ನು ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ.
68.1ಮಿ.ಮೀ. ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 68.1ಮಿ.ಮೀ ಮಳೆಯಾದ ವರದಿ ಬಂದಿದೆ.
ಹೆಬ್ರಿಯಲ್ಲಿ ಅತ್ಯಧಿಕ 100.0ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ ಕನಿಷ್ಠ 34.9ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಬೈಂದೂರಿನಲ್ಲಿ 85.6, ಕಾರ್ಕಳದಲ್ಲಿ 76.2, ಕುಂದಾಪುರದಲ್ಲಿ 61.1, ಉಡುಪಿಯಲ್ಲಿ 48.4 ಹಾಗೂ ಕಾಪುವಿನಲ್ಲಿ 46.4ಮಿ.ಮೀ. ಮಳೆಯಾಗಿದೆ.
11 ಮನೆಗಳಿಗೆ ಹಾನಿ: ಭಾರೀ ಗಾಳಿ-ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ 11 ಮನೆಗಳಿಗೆ ಹಾನಿಯಾದ ವರದಿಗಳು ಬಂದಿದ್ದು, ಸುಮಾರು ಮೂರು ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಶೇಷ ಮೊಗವೀರ ಎಂಬವರ ಮನೆಯ ಮೇಲೆ ಮರ ಬಿದ್ದು ಮೇಲ್ಚಾವಣಿ ಸಂಪೂರ್ಣ ಹಾನಿಗೊಂಡಿದೆ. ಇದರಿಂದ 50,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಜಯರಾಜ್ ಎಂಬವರ ಮನೆ ಮೇಲೆ ಮರ ಬಿದ್ದು 50,000ರೂ., ಎರ್ಲಪಾಡಿ ಗ್ರಾಮದ ವಸಂತಿ ಹಾಡ ಎಂಬ ವರ ಮನೆಯ ಮೇಲ್ಚಾವಣಿ ಗಾಳಿ-ಮಳೆಯಿಂದ ಹಾನಿಗೊಂಡಿದ್ದು 20ಸಾವಿರ ರೂ.ನಷ್ಟವಾಗಿದೆ. ಬ್ರಹ್ಮಾವರ ತಾಲೂಕು ಚೇರ್ಕಾಡಿಯ ಶ್ರೀಮತಿ ಎಂಬ ವರ ಮನೆಯ ಮೇಲೆ ಮರ ಬಿದ್ದು 10 ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕು ಕಂಬದಕೋಣೆಯ ನಾರಾಯಣ ಶೆಟ್ಟಿಯವರ ಮನೆ ಮೇಲೆ ಮರಬಿದ್ದು 35,000ರೂ., ಶಿರೂರು ಗ್ರಾಮದ ಗೋಪಿ ಎಂಬವರ ಮನೆಯ ಮೇಲೆ ಮರ ಬಿದ್ದು 20,000ರೂ., ಕಾಪು ತಾಲೂಕು ಇನ್ನಂಜೆ ಗ್ರಾಮದ ಭಾಸ್ಕರ ಆಚಾರ್ಯರ ಮನೆ ಮೇಲೆ ಮರಬಿದು 20ಸಾವಿರ ರೂ.ನಷ್ಟವಾಗಿದೆ.
ಉಡುಪಿ ತಾಲೂಕು ಅಲೆವೂರು ಗ್ರಾಮದ ಮನೋಹರ ರಾವ್ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು 40,000ರೂ. ಮೂಡನಿಡಂಬೂರು ಗ್ರಾಮದ ಕಮಲ ಪೂಜಾರಿ ಮನೆಯ ಗೋಡೆ ಕುಸಿದು ಭಾಗಶ: ಹಾನಿಯಾಗಿ 60,000ರೂ., ಅಲೆವೂರು ಗ್ರಾಮದ ಗಿರಿಜ ಎಂಬವರ ಮನೆ ಮೇಲೆ ಮರ ಬಿದ್ದು 20,000ರೂ.ನಷ್ಟವಾಗಿದೆ. ಕಾರ್ಕಳ ತಲೂಕು ಕರ್ವಾಶೆ ರಾಮದ ವೆಂಕಟಪ್ಪ ಸರ್ವೆಗಾರ್ ಅವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿ 20,000ರೂ.ನಷ್ಟು ನಷ್ಟದ ಅಂದಾಜು ಮಾಡಲಾಗಿದೆ.