ಹೆಬ್ರಿ: ಪೊಲೀಸ್ ' ಎನ್ಕೌಂಟರ್ಗೆ ' ವಿಕ್ರಂ ಗೌಡ ಬಲಿ
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಬ್ರಿ ಪರಿಸರದಲ್ಲಿ ಕಳೆದ ಕೆಲದಿನಗಳಿಂದ ನಕ್ಸಲ್ ಓಡಾಟ ವರದಿಯಾಗಿದ್ದು, ಎಎನ್ ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ತಡ ಒಂದು ಗಂಟೆ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತ ಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಎಎನ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ದಾಳಿ-ಪ್ರತಿದಾಳಿ ನಡೆದಿದ್ದು, ಪೊಲೀಸರ ಗುಂಡೇಟಿಗೆ ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ .
ಉಳಿದ ನಾಲ್ವರು ಕಾಡಿನ ಹಾದಿಯಲ್ಲಿ ಪರಾರಿಯಾಗಿದ್ದಾರೆ. ಎಎನ್ ಎಫ್ ಕೂಂಬಿಂಗ್ ಮುಂದುವರಿಸಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸುತ್ತಿದೆಎಂದು ಎಎನ್ಎಫ್ ಮೂಲಗಳು ತಿಳಿಸಿವೆ.
ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್ಕೌಂಟರ್ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ವಿಕ್ರಂ ಗೌಡ ಹತನಾದರೆ, ಸಹಚರರಾದ ಮುಂಡುಗಾರು ಲತಾ, ಜಯಣ್ಣ ಹಾಗೂ ವನಜಾಕ್ಷಿ ಕತ್ತಲಲ್ಲಿ ಓಡಿ ಜೀವ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎನ್ಕೌಂಟರ್ ನಡೆದ ದಟ್ಟ ಕಾಡು ಪ್ರದೇಶ ಪೀತಬೈಲಿನಲ್ಲಿ ಎರಡು ಮಲೆಕುಡಿಯರದು ಸೇರಿದಂತೆ ಮೂರು ಮನೆಗಳಿದ್ದು ನಕ್ಸಲರು ರೇಷನ್ ಸಂಗ್ರಹಕ್ಕೆ ಬರುವ ಖಚಿತ ಮಾಹಿತಿ ಮೇರೆಗೆ ಎಎನ್ಎಫ್ ಪಡೆ ಮಧ್ಯರಾತ್ರಿಯಿಂದ ಕಾದು ಕುಳಿತಿತ್ತು.
ಪೀತಬೈಲು ಕಬ್ಬಿನಾಲೆ ಬಸ್ನಿಲ್ದಾಣದಿಂದ ಸುಮಾರು 10ಕಿಮೀ ದೂರದಲ್ಲಿದ್ದು ಸುಮಾರು ಏಳು ಕಿಮೀ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಕಾಡಿನ ಮಧ್ಯದ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಸಹ ದೊರಕಿಲ್ಲ ಎನ್ನಲಾಗಿದೆ.
ಕೆಲ ವರ್ಷಗಳ ಹಿಂದೆ ಶೃಂಗೇರಿ ಸಮೀಪದ ಕಿಗ್ಗದಲ್ಲಿ ನಡೆದ ಎನ್ಕೌಂಟರ್ನಲ್ಲಿ ವಿಕ್ರಂ ಗೌಡನ ಹತ್ಯೆಯಾಗಿದೆ ಎಂದು ವ್ಯಾಪಕ ಸುದ್ದಿಯಾಗಿತ್ತು. ಪತ್ರಕರ್ತರು ಹೆಬ್ರಿಯ ಕೂಡ್ಲನಲ್ಲಿದ್ದ ಆತನ ಮನೆಗೂ ಲಗ್ಗೆ ಇಟ್ಟಿದ್ದರು.
ಆದರೆ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ ವಿಕ್ರಂ ಗೌಡನ ಸಂಬಂಧಿಕರೊಬ್ಬರು ಮೃತದೇಹ ಆತನದ್ದಲ್ಲ ಬೇರೆಯವರದು ಎಂದು ಖಚಿತ ಪಡಿಸಿದ್ದ ಬಳಿಕ ಸುದ್ದಿ ತಣ್ಣಗಾಗಿತ್ತು.
ದಕ್ಷಿಣ ಭಾರತದ ನಿಪುಣ ನಕ್ಸಲ್ ನಾಯಕನಾಗಿರುವ ವಿಕ್ರಂ ಗೌಡ, ನೇತ್ರಾವತಿ ದಳದ ಮುಖ್ಯಸ್ಥ. ಈ ಭಾಗದಲ್ಲಿ ಪೊಲೀಸ್ ಕಾರ್ಯಾಚರಣೆ ತೀವ್ರ ಗೊಂಡ ಬಳಿಕ ಉಳಿದ ಸಂಗಡಿಗರೊಂದಿಗೆ ಕೇರಳಕ್ಕೆ ಪರಾರಿಯಾಗಿದ್ದ. 2016ರಲ್ಲಿ ನೀಲಾಂಬರಿಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಕೂದಲೆಳೆಯಂತರದಲ್ಲಿ ಪಾರಾಗಿದ್ದ ಎನ್ನಲಾಗಿದೆ.