’ಹಿಂದೂ ಏಕತೆಯ ಮಂತ್ರ-ಸುಲಿಗೆಕೋರರ ತಂತ್ರ’: ಚೈತ್ರ ಕುಂದಾಪುರ ಕೃತ್ಯಕ್ಕೆ ಸಿಪಿಎಂ ವ್ಯಂಗ್ಯ
ಬಾಲಕೃಷ್ಣ ಶೆಟ್ಟಿ
ಉಡುಪಿ: ಬೈಂದೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬೆಂಗಳೂರಿನ ಹೊಟೇಲು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಕೊಡಿಸುವುದಾಗಿ ಚೈತ್ರ ಕುಂದಾಪುರ 7 ಕೋಟಿ ರೂ. ವಂಚನೆ ಮಾಡಿರುವುದು ಬಿಜೆಪಿಯ ಉಗ್ರ ಹಿಂದುತ್ವವಾದಿಗಳು ಮಾಡುತ್ತಿರುವ ಲೂಟಿಗೆ ಸಾಕ್ಷಿಯಾಗಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.
ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಆಡಳಿತ ದುರುಪ ಯೋಗ ಮಾಡಿಕೊಂಡು ಲೂಟಿ ಮಾಡಿದರೆ ಅವರ ಹಿಂಬಾಲಕರು ಜನರನ್ನು ಮೋಸ ಮಾಡಿ ಹಣ ಲೂಟಿ ಮಾಡುತ್ತಿದ್ದರು. ಇದಕ್ಕೆ ಖಂಡಿತವಾಗಿ ಬಿಜೆಪಿ ಮತ್ತು ಆರ್ಎಸ್ಎಸ್ನ ಕೃಪಾಕಟಾಕ್ಷ ಇದೆ. ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಚೈತ್ರ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ಕೂಡಾ ಇದ್ದಾರೆ.
ಎಫ್ಐಆರ್ ಪ್ರಕಾರ ಹಡಗಲಿಯ ಅಭಿನವ ಹಾಲಸ್ವಾಮಿ ಎಂಬ ಸ್ವಾಮೀಜಿ, ಟಿಕೆಟ್ ಕೊಡಿಸ್ತೇನೆ ಎಂದು ಗೋವಿಂದ ಬಾಬು ಪೂಜಾರಿಯಿಂದ ಒಂದೂವರೆ ಕೋಟಿಯನ್ನು ಪಡೆದುಕೊಂಡಿದ್ದಾರೆ. ಹಾಲಸ್ವಾಮಿ ಅರೆಸ್ಟ್ ಆದರೆ ದೊಡ್ಡವರೆಲ್ಲ ಸಿಕ್ಕಿ ಬೀಳ್ತಾರೆ ಎಂದು ಚೈತ್ರ ಹೇಳಿದ್ದಾರೆ ಎಂದು ವರದಿಯಾಗಿದೆ. ಹಾಲಸ್ವಾಮಿ ಚಕ್ರವರ್ತಿ ಸೂಲಿಬೆಲೆಗೆ ಆಪ್ತರಾಗಿದ್ದಾರೆ. ಚೈತ್ರ ಮತ್ತು ಅವರ ಸಹವರ್ತಿಗಳನ್ನು ಬಂಧಿಸಿದ ಪೊಲೀಸರು, ಇದರ ಹಿಂದಿರುವ ಇತರ ವ್ಯಕ್ತಿಗಳ ಚರಿತ್ರೆಯನ್ನು ಜನತೆಗೆ ಬಹಿರಂಗ ಪಡಿಸಬೇಕೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.