ಹಿರಿಯಡ್ಕ: ವಿದ್ಯಾರ್ಥಿ ಆತ್ಮಹತ್ಯೆ
ಹಿರಿಯಡ್ಕ, ಆ.20: ಮೊಬೈಲ್ನ್ನು ಲಾಕ್ ಮಾಡದಂತೆ ಬುದ್ಧಿವಾದ ಹೇಳಿದ್ದರಿಂದ ಬೇಸರಗೊಂಡ ವಿದ್ಯಾರ್ಥಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಬೊಮ್ಮರಬೆಟ್ಟಿನಿಂದ ವರದಿಯಾಗಿದೆ.
ಅಂಜಾರು ಗ್ರಾಮದ ಓಂತಿಬೆಟ್ಟುನ ಪುಷ್ಪರಾಜ್ ಎಂಬವರ ಮಗನಾದ ಪ್ರಥಮೇಶ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹಿರಿಯಡ್ಕ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಯಾಗಿದ್ದ ಪ್ರಥಮೇಶ್ ಮೊಬೈಲ್ ಸ್ಮಾರ್ಟ್ಫೋನಿನಲ್ಲಿ ಆಟವಾಡುವ ಅಭ್ಯಾಸವಿದ್ದು, ಅದನ್ನು ಲಾಕ್ ಮಾಡದಂತೆ ನಿನ್ನೆ ಮನೆಯವರು ಬುದ್ಧಿವಾದ ಹೇಳಿದ್ದರು.
ತನ್ನ ಮೊಬೈಲ್ನ್ನು ಲಾಕ್ ಮಾಡಿ ಕಾಲೇಜಿಗೆ ಹೋದ ಪ್ರಥಮೇಶ್ ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದು, ಹಿರಿಯಡ್ಕ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಬೆಳಗ್ಗೆ ಕಾಲೇಜು ಸಮೀಪದ ಕುಜಂಬೈಲಿನ ಕಲ್ಕೂರರ ಮನೆಯ ಬಾವಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story