ಕಾರ್ಕಳ ಶಾಸಕರ ಕುಟುಂಬದ ಹೆಸರಿನಲ್ಲಿರುವ ಕಟ್ಟಡ ಸರಕಾರಿ ಕಟ್ಟಡವಾಗಲು ಹೇಗೆ ಸಾಧ್ಯ: ಶುಭದರಾವ್ ಪ್ರಶ್ನೆ
ಶುಭದ ರಾವ್
ಕಾರ್ಕಳ, ಜು.1: ಕಾರ್ಕಳ ಶಾಸಕ ಸುನೀಲ್ ಕುಮಾರ್ ತಮ್ಮ ಪಕ್ಷದ ಕಚೇರಿಯಲ್ಲಿ ಸರಕಾರಿ ಅಧಿಕಾರಿಗಳ ಸಭೆ ನಡೆಸುವ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದೇವು, ಆದರೆ ಬಿಜೆಪಿ ಕಾರ್ಯದರ್ಶಿ 'ಪಕ್ಷದ ಕಚೇರಿಯೇ ಸರಕಾರಿ ಕಚೇರಿ' ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಇದರಿಂದ ಅವರು ಮುಗ್ದರೋ ಅಥವಾ ಮೂರ್ಖರೋ ಎಂಬ ಸಂಶಯ ವ್ಯಕ್ತವಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪುರಸಭಾ ಸದಸ್ಯ ಶುಭದ ರಾವ್ ವ್ಯಂಗ್ಯವಾಡಿದ್ದಾರೆ.
ಶಾಸಕ ಸುನೀಲ್ ಕುಮಾರ್ ತಮ್ಮ ಕಚೇರಿಗೆ ಮಾರಾಟಕಿಲ್ಲದ ಸರಕಾರಿ ಸಿಮೆಂಟ್ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಾಗ ಆ ಕಟ್ಟಡವನ್ನು ನನ್ನ ಕುಟುಂಬದವರು ನಿರ್ಮಾಣ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಹಾಗಾಗಿ ಶಾಸಕರ ಕುಟುಂಬದ ಹೆಸರಿನಲ್ಲಿರುವ ಕಟ್ಟಡ ಸರಕಾರಿ ಕಟ್ಟಡ ಆಗಲು ಹೇಗೆ ಸಾಧ್ಯ ಎಂದು ಶುಭದ ರಾವ್ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ?
ಕಾರ್ಕಳ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಶಾಸಕರಿಗೆ ನೀಡಿರುವ ಕಚೇರಿಯೇ ಅಧಿಕೃತ ಕಚೇರಿ. ಅದಲ್ಲದೆ ಪಕ್ಷದ ಚಟುವಟಿಕೆ ನಡೆಯುವ ಇತರ ಯಾವುದೇ ಕಚೇರಿ ಅಧಿಕೃತವಾಗುವುದಿಲ್ಲ. ಇದು ಗೊತ್ತಿದ್ದು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರೆ ಮುಂದಿನ ಅನಾಹುತಗಳಿಗೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಹೇಳಿದ್ದಾರೆ.