ಸೆ.2ರಿಂದ ಉಡುಪಿ ಜಿಲ್ಲೆಯಲ್ಲಿ ಸ್ಥಿರಾಸ್ಥಿಗಳ ‘ಎನಿವೇರ್ ನೋಂದಣಿ’ ವ್ಯವಸ್ಥೆ ಜಾರಿ: ಡಿಸಿ ವಿದ್ಯಾಕುಮಾರಿ
ಉಡುಪಿ, ಆ.29: ಸೆಪ್ಟಂಬರ್ 2ರಿಂದ ಸ್ಥಿರಾಸ್ಥಿಗಳನ್ನು ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡುವ ‘ಎನಿವೇರ್ ನೋಂದಣಿ’ ವ್ಯವಸ್ಥೆ ಜಾರಿಗೊಳ್ಳಲಿದೆ. ಇದರ ಅಡಿಯಲ್ಲಿ ಸಾರ್ವಜನಿಕರು ತಮ್ಮ ದಸ್ತಾವೇಜನ್ನು ಸ್ಥಿರಾಸ್ಥಿ ಇರುವ ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಕಳೆದ ಬಜೆಟ್ ಭಾಷಣದಲ್ಲಿ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವು ದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಅದರಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಕ ಸೆ.2ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದು ಜಾರಿಗೊಳ್ಳಲಿದೆ ಎಂದರು.
ಈ ವ್ಯವಸ್ಥೆ 2011ರಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಜಾರಿಗೆ ತರಲಾಗಿತ್ತು. ಬಳಿಕ ಕಳೆದ ಮಾರ್ಚ್ ತಿಂಗಳಲ್ಲಿ ಪ್ರಾಯೋಗಿಕವಾಗಿ ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಇದನ್ನು ಪೈಲೆಟ್ ಯೋಜನೆಯಾಗಿ ನೋಂದಣಿ ಕಾಯ್ದೆ 1998ರ ಕಲಂ(5) ಹಾಗೂ ಕಲಂ(6)ರಡಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಎನಿವೇರ್ ನೋಂದಣಿ ವ್ಯವಸ್ಥೆ ಈ ಜಿಲ್ಲೆ ಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನೀಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗು ತ್ತಿದೆ ಎಂದವರು ವಿವರಿಸಿದರು.
ಜಿಲ್ಲೆಯ 6 ಕಡೆಗಳಲ್ಲಿ ನೋಂದಣಿ: ಪ್ರಸ್ತುತ ಸಾರ್ವಜನಿಕರು ಸ್ಥಿರಾಸ್ಥಿ ಇರುವ ವ್ಯಾಪ್ತಿಯ ಉಪನೋಂದಣಿ ಕಚೇರಿಯಲ್ಲಿ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲು ಅವಕಾಶವಿದೆ. ಆದರೆ ಸೆ.2ರಂದು ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ ಗೊಂಡಾಗ ಆಸ್ತಿಯ ದಸ್ತಾವೇಜನ್ನು ಸ್ಥಿರಾಸ್ಥಿ ಇರುವ ಜಿಲ್ಲೆಯ ಆರು ಉಪನೋಂದಣಿ ಕಚೇರಿಗಳಲ್ಲಿ ಯಾವುದೇ ಕಚೇರಿ ಯಲ್ಲಿ ಬೇಕಿದ್ದರೂ ನೋಂದಾಯಿಸಿಕೊಳ್ಳಬಹುದು ಎಂದು ಡಿಸಿ ಹೇಳಿದರು.
ಎನಿವೇರ್ ನೋಂದಣಿ ವ್ಯವಸ್ಥೆ ಸಾರ್ವಜನಿಕರಿಗೆ ಉಪಯುಕ್ತವಾಗಿದ್ದು, ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆ ಯನ್ನು ಹೆಚ್ಚಿಸಲಿದೆ. ನೋಂದಣಿಯಲ್ಲಾಗುವ ವಿಳಂಬವನ್ನು ತಪ್ಪಿಸಲಿದೆ. ಸಾರ್ವಜನಿಕರು ಬೇಕಿದ್ದರೆ ತಮಗೆ ಸಮೀಪದ ಉಪನೋಂದಣಿ ಕಚೇರಿಯಲ್ಲಿ ದಸ್ತಾವೇಜನ್ನು ನೋಂದಾ ಯಿಸಬಹುದು. ಅಥವಾ ಸ್ಪಾಟ್ ಲಭ್ಯವಿರುವ ಯಾವುದೇ ಕಚೇರಿಯನ್ನು ನೋಂದಣಿಗೆ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನೋಂದಣಿ ಪ್ರಕ್ರಿಯೆ ಸುಲಭವಾಗುವುದಲ್ಲದೇ ಸಮಯದ ಉಳಿತಾಯವೂ ಆಗುತ್ತದೆ ಎಂದರು.
ಜಿಲ್ಲೆಯಲ್ಲಿ 6 ಉಪನೋಂದಣಿ ಕಚೇರಿ: ಉಡುಪಿ ಜಿಲ್ಲೆಯಲ್ಲಿ ಸದ್ಯ ಆರು ಉಪನೋಂದಣಿ ಕಚೇರಿಗಳಿವೆ. ಉಡುಪಿ, ಬ್ರಹ್ಮಾ ವರ, ಕುಂದಾಪುರ, ಶಂಕರನಾರಾಯಣ, ಬೈಂದೂರು ಹಾಗೂ ಕಾರ್ಕಳಗಳಲ್ಲಿ ಉಪನೋಂದಣಿ ಕಚೇರಿಗಳಿವೆ. ಹೊಸ ವ್ಯವಸ್ಥೆಯಿಂದ ಉಡುಪಿಯಲ್ಲಿ ಆಸ್ತಿ ಹೊಂದಿರುವವರು ಶಂಕರನಾರಾಯಣದ ನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿ ನೋಂದಣಿ ಮಾಡಬಹುದಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿದಿನ 120ರಿಂದ 130ರಷ್ಟು ನೋಂದಣಿ ಆಗುತ್ತಿವೆ. ಉಡುಪಿಯಲ್ಲಿ 60, ಕುಂದಾಪುರ ಹಾಗೂ ಬ್ರಹ್ಮಾವರಗಳಲಿ ಸುಮಾರು 40ರಷ್ಟು ನೊಂದಣಿ ನಡೆಯುತ್ತಿದೆ. ಹೊಸ ವ್ಯವಸ್ಥೆಯಿಂದ ಉಪನೋಂದಣಿ ಕಚೇರಿಗಳಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ ಹಾಗೂ ನೋಂದಣಿ ಕೆಲಸ ಸಮಾನವಾಗಿ ಹಂಚಿಕೆಯಾಗಲಿದೆ ಎಂದವರು ತಿಳಿಸಿದರು.
ಸದ್ಯ ಕಾಪು ತಾಲೂಕಿನ ಕೆಲವು ಗ್ರಾಮಗಳ ನೋಂದಣಿ ಮೂಲ್ಕಿ ಉಪನೋಂದಣಿ ಕಚೇರಿಯಲ್ಲಾಗುತ್ತಿದೆ. ಇನ್ನು ಮುಂದೆಯೂ ಇವರು ಮೂಲ್ಕಿ ಅಥವಾ ದಕ್ಷಿಣ ಕನ್ನಡದ ಯಾವುದೇ ಉಪನೋಂದಣಿ ಕಚೇರಿಯಲ್ಲಿ ಇವುಗಳ ನೋಂದಣಿ ಪ್ರಕ್ರಿಯೆ ನಡೆಸಬಹುದು ಎಂದರು.
ಕಾಪುವಿಗೆ ಪ್ರತ್ಯೇಕ ಉಪನೋಂದಣಿ ಕಚೇರಿಗಾಗಿ ಪ್ರಸ್ತಾಪ ಸಲ್ಲಿಸಲಾಗಿದೆ. ಇದು ಮಂಜೂರಾದಾಗ ಈ ಗ್ರಾಮಗಳ ನೊಂದಣಿ ಕಾಪುವಿಗೆ ವರ್ಗಾವಣೆ ಗೊಳ್ಳಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.