ಉಡುಪಿ ಜಿಲ್ಲೆಯಲ್ಲಿ ಮಳೆಗೆ ಏಳು ಮನೆ, ಕೊಟ್ಟಿಗೆಗೆ ಹಾನಿ
ಉಡುಪಿ, ಜು.29: ಒಂದು ವಾರದ ಅಬ್ಬರದ ಬಳಿಕ ಜಿಲ್ಲೆಯ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಗಾಳಿ-ಮಳೆಯಿಂದ ಉಂಟಾಗುವ ಹಾನಿಯ ಪ್ರಕರಣಗಳು ಮುಂದುವರಿದಿದೆ. ನಿನ್ನೆ ಹಾಗೂ ಇಂದು ಜಿಲ್ಲೆಯಲ್ಲಿ ಒಟ್ಟು 7 ಮನೆಗಳಿಗೆ ಒಂದು ಕೊಟ್ಟಿಗೆಗೆ ಹಾನಿಯಾಗಿದ್ದು, 5.5ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಹೆಬ್ರಿ ತಾಲೂಕು ಶಿವಪುರ ಗ್ರಾಮದ ನಾರಾಯಣ ಎಂಬವರ ಮನೆ ಗಾಳಿ-ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಇದರಿಂದ ಮೂರು ಲಕ್ಷ ರೂ.ಗಳ ನಷ್ಟವಾಗಿರುವ ವರದಿ ಬಂದಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ತಿಮ್ಮಪ್ಪ ಪೂಜಾರಿ ಅವರ ಮನೆಯೂ ಭಾಗಶ: ಹಾನಿ ಗೊಂಡಿದ್ದು 75,000ರೂ.ನಷ್ಟವಾಗಿದೆ.
ಇನ್ನು ಕಾವ್ರಾಡಿಯ ಅಣ್ಣು ಅವರ ಮನೆಗೆ ಮೇಲೆ ಮರಬಿದ್ದು, ಬೈಂದೂರು ತಾಲೂಕು ಕೆರ್ಗಾಲು ಗ್ರಾಮದ ಶೇಷಿ ಎಂಬವರ ಮನೆಯ ಗೋಡೆ ಗಾಳಿ-ಮಳೆಗೆ ಕುಸಿದು ತಲಾ 40ಸಾವಿರ ರೂ.ನಷ್ಟವಾಗಿದೆ. ಕಂಬದಕೋಣೆಯ ಮಹಾಬಲ ಜೋಗಿ ಅವರ ಮನೆ ಮೇಲೆ ಮರ ಬಿದ್ದು 30 ಸಾವಿರ, ಹಕ್ಲಾಡಿಯ ರಾಮ ಪೂಜಾರಿ ಹಾಗೂ ಬ್ರಹ್ಮಾವರ ಪಾಂಡೇಶ್ವರ ದ ಮಥಾಯಸ್ ಅಲ್ಮೆಡ ಮನೆಗೂ ಹಾನಿಯಾಗಿದ್ದು 30ಸಾವಿರನಷ್ಟವಾಗಿದೆ.
ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಮಹಾಲಿಂಗ ದೇವಾಡಿಗರ ಮನೆಯ ಜಾನುವಾರು ಕೊಟ್ಟಿಗೆ ಗಾಳಿ-ಮಳೆಗೆ ಹಾನಿಯಾಗಿದ್ದು 50,000ರೂ. ನಷ್ಟದ ಅಂದಾಜು ಮಾಡಲಾಗಿದೆ. ಶುಕ್ರವಾರ ಬ್ರಹ್ಮಾವರದ ನಾಲ್ಕೂರು ಗ್ರಾಮದ ಮಂದಾರ ಶೆಟ್ಟಿ ಅವರ ಕೊಟ್ಟಿಗೆಗೆ ಹಾಗೂ ಹೆಬ್ರಿ ತಾಲೂಕು ಕೆರೆಬೆಟ್ಟು ಗ್ರಾಮದ ಸಂಜೀವ ಮರಕಾಲರ ಕೊಟ್ಟಿಗೆಗೆ ಭಾಗಶ: ಹಾನಿಯಾಗಿ 60ಸಾವಿರ ರೂ.ನಷ್ಟವಾಗಿದೆ.
ಗುರುವಾರವೂ ಜಿಲ್ಲೆಯಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಕಾಪು ತಾಲೂಕು ಮಜೂರಿನ ಬೇಬಿ ಎಂಬವರ ಮನೆಗೆ 2.80 ಲಕ್ಷ ರೂ., ಬ್ರಹ್ಮಾವರ ಐರೋಡಿ ಗ್ರಾಮದ ಗೋವಿಂದರ ಮನೆಗೆ 45,000, ಬೈಂದೂರು ಉಪ್ಪುಂದ ಗ್ರಾಮದ ಕುಪ್ಪ ಖಾರ್ವಿ ಅವರ ಮನೆ ಮೇಲೆ ಮರ ಬಿದ್ದು 30,000 ಹಾಗೂ ಮೂಡನಿಡಂಬೂರು ಗ್ರಾಮದ ರಾಮ ಎಂಬವರ ಮನೆಗೆ 25,000ರೂ. ನಷ್ಟದ ಅಂದಾಜು ಮಾಡಲಾಗಿದೆ.
24.8ಮಿ.ಮೀ. ಮಳೆ: ಜಿಲ್ಲೆಯಲ್ಲಿ ಇಂದು ಬೆಳಗ್ಗಿನವರೆಗೆ ಸರಾಸರಿ 24.8ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 27.8, ಬ್ರಹ್ಮಾವರದಲ್ಲಿ 15.3, ಕಾಪುವಿನಲ್ಲಿ 18.9, ಕುಂದಾಪುರದಲ್ಲಿ 24.0, ಬೈಂದೂರಿನಲ್ಲಿ 26.3, ಕಾರ್ಕಳದಲ್ಲಿ 27.2, ಹೆಬ್ರಿಯಲ್ಲಿ 29.6ಮಿ.ಮೀ. ಮಳೆಯಾದ ವರದಿ ಬಂದಿದೆ.