ಉಡುಪಿ ರೈಲು ನಿಲ್ದಾಣದಲ್ಲಿ ಎಕ್ಸಿಕ್ಯುಟಿವ್ ಲಾಂಜ್ ಉದ್ಘಾಟನೆ
ಉಡುಪಿ, ಆ.16: ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅತ್ಯುತ್ತಮ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಉಡುಪಿಯ ಇಂದ್ರಾಳಿಯಲ್ಲಿರುವ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸಂಪೂರ್ಣ ಹವಾನಿಯಂತ್ರಿತ ‘ಎಕ್ಸಿಕ್ಯೂಟಿವ್ ಲಾಂಜ್’ನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಇಂದು ಉದ್ಘಾಟಿಸಿದರು.
ಉಡುಪಿ ರೈಲು ನಿಲ್ದಾಣದ ಫ್ಲಾಟ್‌ಫಾರಂ ನಂ.1ರಲ್ಲಿ ಉದ್ಘಾಟನೆಗೊಂಡ ಈ ಲಾಂಜ್‌ನ ಪ್ರಯೋಜನವನ್ನು ಜನ ಸಾಮಾನ್ಯರೂ ಪಡೆದುಕೊಳ್ಳುವಂತೆ ಅತೀ ಕಡಿಮೆ ದರವನ್ನು ಇರಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್‌ಕುಮಾರ್ ಝಾ ತಿಳಿಸಿದರು.
ರೈಲು ನಿಲ್ದಾಣಕ್ಕೆ ಬಂದು ರೈಲಿಗಾಗಿ ಕಾಯುವ ಪ್ರಯಾಣಿಕರಿಗೆ, ಅಥವಾ ಇಲ್ಲಿಂದ ಬೇರೆ ಕಡೆ ತೆರಳುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸುಖಾಸೀನಗಳು, ಓದಲು ದಿನಪತ್ರಿಕೆ ಹಾಗೂ ಮ್ಯಾಗಝೀನ್‌ಗಳು, ಉಚಿತ ವೈಫೈ ಸೌಲಭ್ಯ, ದಿನದ 24 ಗಂಟೆಯೂ ಲಭ್ಯವಿರುವ ಟೆಲಿವಿಷನ್ ಪ್ರಸಾರ, ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯ ಹಾಗೂ ಪ್ರಯಾಣಿಕರ ಬಳಕೆಗೆ ಸ್ವಚ್ಛ ಶೌಚಾಲಯ ವ್ಯವಸ್ಥೆ ಇದರಲ್ಲಿದೆ. ಸದ್ಯ ಇಲ್ಲಿ ಗಂಟೆಗೆ 50ರೂ. ಶುಲ್ಕವನ್ನು ಮಾತ್ರ ಪಡೆಯ ಲಾಗುತ್ತದೆ ಎಂದು ಲಾಂಜ್‌ನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಲಾಂಜ್‌ನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ನಿಲ್ದಾಣವನ್ನು ಮೇಲ್ದರ್ಜೆಗೇ ರಿಸುವ ನಿಟ್ಟಿನಲ್ಲಿ ಇಂದಿನ ಸೌಲಭ್ಯವನ್ನು ಒದಗಿಸಲಾಗಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಯೊಂದಿಗೆ ವಿಲೀನಗೊಳಿಸುವ ಬಗ್ಗೆ ಈಗಾಗಲೇ ಸಂಬಂಧಿತ ಸಚಿವರೊಂದಿಗೆ ಮಾತನಾಡಲಾಗಿದೆ. ಕೊಂಕಣ ರೈಲು ಮಾರ್ಗದಲ್ಲಿ ಇನ್ನಷ್ಟು ಸೌಲಭ್ಯ ನೀಡಲು ಮನವಿಯನ್ನು ಸಹ ನೀಡಲಾಗಿದೆ. ಸಚಿವರು ಈ ಬಗ್ಗೆ ಸಕಾರಾತ್ಮವಾಗಿ ಸ್ಪಂಧಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಕೊಂಕಣ ರೈಲ್ವೆ ಕರಾವಳಿ ಭಾಗದ ಜನರ ಕನಸಾಗಿದೆ. ಇದನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ನಿನ್ನೆಯಷ್ಟೇ ಜಿಲ್ಲೆಗೆ ಆಗಮಿಸಿದ ರೈಲ್ವೆ ಸಚಿವ ಸೋಮಣ್ಣರನ್ನು ಭೇಟಿಯಾಗಿ ಮನವಿ ನೀಡಲಾಗಿದೆ ಎಂದರು.
ಕರಾವಳಿಗೆ ರಾಜ್ಯದ ರಾಜಧಾನಿ ಬೆಂಗಳೂರಿನೊಂದಿಗೆ ಮಳೆಗಾಲದಲ್ಲೂ ಸುಗಮ ಸಂಪರ್ಕಕ್ಕಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ರೈಲು ಹಾಗೂ ಬಸ್ಸುಗಳಿಗೆ ಸುರಂಗ ಮಾರ್ಗ ನಿರ್ಮಿಸುವಂತೆ ಸಚಿವರಾದ ನಿತಿನ್ ಗಡ್ಕರಿ ಹಾಗೂ ಸೋಮಣ್ಣರಿಗೆ ಮನವಿ ಸಲ್ಲಿಸಲಾಗಿದೆ. ಸುರಂಗ ಮಾರ್ಗದಿಂದ ಬೆಂಗಳೂರಿಗೆ ತೆರಳುವ ಸಮಯದಲ್ಲೂ ಭಾರೀ ಉಳಿತಾಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳಾದ ಬಿ.ಬಿ.ನಿಕ್ಕಂ, ನಾಗದತ್ ರಾವ್, ದಿಲೀಪ್ ಭಟ್, ಎಸ್.ಕೆ.ಬಾಲಾ, ಆರ್.ಡಿ.ಘೋಲಾಬ್, ಸುಧಾ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತ ರಿದ್ದರು.
2 ಕೋಟಿ ವೆಚ್ಚದಲ್ಲಿ ಪ್ಲಾಟ್‌ಫಾರಂ ಶೆಲ್ಟರ್
ಉಡುಪಿ ರೈಲ್ವೆ ನಿಲ್ದಾಣವು ಕೊಂಕಣ ರೈಲ್ವೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿ ಮೂಲಸೌಕರ್ಯಗಳು ಹಾಗೂ ಇತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ನಿಗಮದ ಸಿಎಂಡಿ ಸಂತೋಷ ಕುಮಾರ್ ಝಾ ತಿಳಿಸಿದರು.
ಉಡುಪಿ ನಿಲ್ದಾಣದ ಪ್ಲಾಟ್‌ಫಾರಂ ಶೆಲ್ಟರ್ ಹಾಗೂ ನೆಲಹಾಸಿಗಾಗಿ ಎರಡು ಕೋಟಿ ರೂ.ಗಳ ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿದೆ. ಸ್ಥಳೀಯ ಸಂಸದರು ಹಾಗೂ ಶಾಸಕರು ಈಗಾಗಲೇ ಹಲವು ಪ್ರಸ್ತಾಪಗಳನ್ನು ನೀಡಿದ್ದು, ಈ ಬಗ್ಗೆ ಇಂದು ಅವರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತುಕತೆ ನಡೆಸಲಾಗುವುದು ಎಂದರು.
ಉಡುಪಿಯಲ್ಲಿ ಪಾರ್ಕಿಂಗ್ ಪ್ರದೇಶದ ಅಭಿವೃದ್ಧಿಗೂ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಉಡುಪಿ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ 9 ಕೋಟಿ ರೂ.ಗಳಿಗೂ ಅಧಿಕ ಹಣ ಬೇಕಾಗುತ್ತದೆ. ಹೀಗಾಗಿ ನಾವು ಹಂತ ಹಂತವಾಗಿ ಅಭಿವೃದ್ಧಿ ಚಟುವಟಿಕೆ ಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದರು.
ನಿಲ್ದಾಣಕ್ಕೆ ಲಿಫ್ಟ್: ಈಗ ನಿಲ್ದಾಣದ ಪ್ರಯಾಣಿಕರ ಬಳಕೆಗೆ ಲಭ್ಯವಿರದ ಎಸ್ಕಲೇಟರ್‌ನ್ನು ಬೇರೆ ಕಡೆ ವರ್ಗಾಯಿಸಿ, ಜನರು ಅದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಲಾಗುವುದು. ಇದರೊಂದಿಗೆ ಇಲ್ಲಿಗೆ ಲಿಫ್ಟ್ ವ್ಯವಸ್ಥೆಯನ್ನೂ ಒದಗಿಸ ಲಾಗುವುದು ಎಂದು ಝಾ ಹೇಳಿದರು.
ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯ ಇತರ ಯಾವುದಾದರೂ ಮಂಡಳಿಯೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವಿದೆಯೇ ಎಂದು ಕೇಳಿದಾಗ, ಈ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದರು.