ಮಾಹೆ ಮಣಿಪಾಲದ ‘ಆಟಿದ ತುಳು ಪರ್ಬ’ ಆಚರಣೆ ಉದ್ಘಾಟನೆ
ಮಣಿಪಾಲ, ಆ.13:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದೇ ಮೊದಲ ಬಾರಿ ಆಯೋಜಿಸಿದ ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಆಚರಣೆಯ ‘ಆಟಿದ ತುಳು ಪರ್ಬ’ವನ್ನು ಮಂಗಳವಾರ ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ ಪೈ ಸಭಾಂಗಣದಲ್ಲಿ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಪಿಂಗಾರ ಕೊನೆಯನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.
ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ಮತ್ತು ಪ್ರಚಾರ ಮಾಡುವಲ್ಲಿ ತುಳು ಪರ್ಬದ ಮಹತ್ವವನ್ನು ತಮ್ಮ ಉದ್ಘಾಟನಾ ಭಾಷಣದಲ್ಲಿ ಒತ್ತಿ ಹೇಳಿದ ಡಾ.ಬಲ್ಲಾಳ್, ತುಳುನಾಡು ಅದರ ಭೌಗೋಳಿಕ ಮತ್ತು ಭಾಷಾ ಗುರುತು ಗಳಿಗಿಂತ ಮಿಗಿಲಾದದ್ದು. ಇದು ಒಂದು ಜೀವಂತ, ಉಸಿರಾಟದ ಸಾಂಸ್ಕೃತಿಕ ರಚನೆಯಾಗಿದ್ದು ಅದು ತನ್ನ ಜನರನ್ನು ತನ್ನದೇ ಆದ ಸಂಪ್ರದಾಯಗಳು, ಆಚರಣೆಗಳು ಮತ್ತು ಸಂಸ್ಕೃತಿಯ ಮೂಲಕ ಬಂಧಿಸುತ್ತದೆ . ಈ ಆಚರಣೆಯು ತುಳುನಾಡಿನ ಅಸ್ಮಿತೆಯನ್ನು ವ್ಯಾಖ್ಯಾನಿಸುವ, ಆಳವಾದ ಬೇರೂರಿರುವ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದರು.
ಮಣಿಪಾಲದ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿನಿ ದೃತಿ ಶೆಟ್ಟಿ ತುಳು ಭಾಷೆಯಲ್ಲಿ ಮನಮುಟ್ಟುವ ಭಾಷಣ ಮಾಡಿ, ತುಳುನಾಡಿನ ವೈವಿಧ್ಯಮಯ, ರೋಚಕ ಸಾಂಸ್ಕೃತಿಕ ಆಚರಣೆಗಳನ್ನು ಎತ್ತಿ ತೋರಿಸಿದರು. ಈ ಪ್ರದೇಶದ ಅಸ್ಮಿತೆಗೆ ಅವಿಭಾಜ್ಯವಾಗಿರುವ ಪ್ರಕೃತಿ ಮತ್ತು ಕೃಷಿ ಯೊಂದಿಗಿನ ಸಮುದಾಯದ ಸಂಬಂಧದ ಬಗ್ಗೆ ಅವರು ಮಾತನಾಡಿದರು.
ಸಮಾರಂಭದಲ್ಲಿ ಗೌರವ ಅತಿಥಿಯಾಗಿದ್ದ ಮಾಹೆಯ ಸಿಒಒ ಡಾ. ರವಿರಾಜ ಎನ್.ಎಸ್., ಅಂತಾರಾಷ್ಟ್ರೀಯ ಸಹ ಯೋಗದ ನಿರ್ದೇಶಕ ಡಾ.ಕರುಣಾಕರ ಕೋಟೆಗಾರ್ ತುಳು ಸಂಸ್ಕೃತಿ, ಸಂಪ್ರದಾಯಗಳ ಕುರಿತು ವಿವರಿಸಿ ನಮ್ಮ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಹಾಗೂ ಪ್ರಚುರ ಪಡಿಸುವಲ್ಲಿ ಮಾಹೆಯ ಕೊಡುಗೆಯನ್ನು ವಿವರಿಸಿದರು.
ತುಳು ರಂಗ್ ಎಂಬ ಚಿತ್ರಕಲಾ ಸ್ಪರ್ಧೆಯೊಂದಿಗೆ ಚಟುವಟಿಕೆಗಳು ಪ್ರಾರಂಭಗೊಂಡವು. ಬಳಿಕ ತುಳು ಜಾನಪದ ಸಮೂಹ ನೃತ್ಯ, ತುಳುನಾಡಿನ ಸಂಸ್ಕೃತಿ ಕುರಿತ ‘ತುಳು ಬದ್ಕ್’ ಪ್ರಸ್ತುತಗೊಂಡವು. ಭೂತ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ಪ್ರದರ್ಶನವೂ ನಡೆಯಿತು.
ನಂತರ ಭೂತಾರಾಧನೆ, ಕಂಬಳ, ಯಕ್ಷಗಾನ ಮತ್ತು ಕರಕುಶಲತೆ ಸೇರಿದಂತೆ ತುಳು ಸಾಂಸ್ಕೃತಿಕ ಆಚರಣೆಗಳಲ್ಲಿ ಪರಿಣಿತರನ್ನು ಒಳಗೊಂಡ ಸಂವಾದವು ನಡೆಯಿತು. ದಿನವಿಡೀ ಸ್ಥಳೀಯ ಕುಶಲಕರ್ಮಿಗಳನ್ನು ಒಳಗೊಂಡ ಸಾಂಪ್ರದಾ ಯಿಕ ಕಲೆ ಮತ್ತು ಕರಕುಶಲ ಪ್ರದರ್ಶನವೂ ನಡೆದವು. ನೆರೆದ ಜನಸಮೂಹ ತುಳುನಾಡಿನ ಪಾಕಪದ್ಧತಿಯೊಂದಿಗೆ ಪಾಕಶಾಲೆಯ ಆನಂದ ವನ್ನು ಅನುಭವಿಸಿದರು. ಪ್ರದೇಶದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಹೆಗ್ಗುರುತು ಗಳನ್ನು ಅನ್ವೇಷಿಸುವ ಮಾರ್ಗದರ್ಶಿ ಪರಂಪರೆಯ ನಡಿಗೆಗಳಲ್ಲಿ ಭಾಗವಹಿಸಿದರು.
ಎಂಯು ಕೇಂದ್ರದ ಸಂಯೋಜಕರಾದ ಡಾ. ಪ್ರವೀಣ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಶೃತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.