ಕೋಡಿ ಬ್ಯಾರೀಸ್‌ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ಕುಂದಾಪುರ: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಧ್ವಜಾರೋಹಣಗೈದ ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಗಣಪತಿ ಖಾರ್ವಿ ಮಾತನಾಡಿ, ದೇಶಾಭಿಮಾನ ನಮ್ಮ ವಿದ್ಯಾರ್ಥಿಗಳ ಮನ ಮನೆಯಲ್ಲಿ ನೆಲೆಯಾಗಬೇಕು. ದೇಶ ನನಗೇನು ಕೊಟ್ಟಿದೆ ಎಂದು ಪ್ರಶ್ನಿಸದೆ ದೇಶಕ್ಕಾಗಿ ನಾನೇನು ಕೊಡಬೇಕಾಗಿದೆ ಎಂದು ಯೋಚಿಸಬೇಕು ಎಂದರು.
ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ. ಎಂ.ಅಬ್ದುಲ್ ರೆಹಮಾನ್ ವಹಿಸಿದ್ದರು. ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸೀಫ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಶಾಲಾಭಿವೃದ್ಧಿ ಸಮಿತಿ ಹಾಗೂ ಸಲಹಾ ಮಂಡಳಿಯ ಸರ್ವ ಸದಸ್ಯರು, ಕುಂದಾಪುರ ಪುರಸಭಾ ಸದಸ್ಯರು, ಊರಿನ ಪ್ರಮುಖರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಇದೇ ವೇಳೆ ಸ್ವಚ್ಛ ಕಡಲತೀರ - ಹಸಿರು ಕೋಡಿಯ 33ನೇ ಅಭಿಯಾನದ ಅಂಗವಾಗಿ ಸಾವಿರ ಸಸಿಗಳನ್ನು ನೆಡುವ ಕಾರ್ಯವನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ವಿದ್ಯಾರ್ಥಿ ಸಮೂಹದೊಂದಿಗೆ ನಡೆಸ ಲಾಯಿತು. ಕನ್ನಡ ಉಪನ್ಯಾಸಕ ಡಾ.ಸಂದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.