ಕೋಡಿ ಬ್ಯಾರೀಸ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಕುಂದಾಪುರ, ಆ.17: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ವನ್ನು ಮಾಜಿ ಯೋಧ ಸಂತೋಷ್ ಕುಮಾರ್ ಶೆಟ್ಟಿ ಅವರು ಆ.15ರಂದು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಇವರು ಇಂದಿನ ಮಕ್ಕಳೇ ಮುಂದಿನ ದೇಶದ ಸತ್ಪ್ರಜೆಗಳು. ಈ ಕಿರಿಯ ವಯಸ್ಸಿನಲ್ಲೇ ಅವರಲ್ಲಿ ದೇಶಾಭಿಮಾನವನ್ನು ಮೂಡಿಸಬೇಕು. ಈಗಲೇ ಒಂದು ದೃಢವಾದ ಗುರಿಯನ್ನು ಹಾಕಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು. ಇದೇ ವೇಳೆ ಅವರನ್ನು ಸನ್ಮಾನಿಸಲಾಯಿತು.
ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ಎಚ್.ಕೆ.ಎಂ. ಬ್ಯಾರಿ ಕನ್ನಡ ಅನುದಾನಿತ ಪ್ರೌಢಶಾಲಾ ಹಳೆ ವಿದ್ಯಾರ್ಥಿನಿ ದಿವ್ಯ ಅವರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ವಹಿಸಿದ್ದರು.
ಬ್ಯಾರೀಸ್ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸೀಫ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರ ಪುರಸಭಾ ಸದಸ್ಯೆ ಲಕ್ಷ್ಮೀಬಾಯಿ, ಕುಂದಾಪುರ ಪುರಸಭಾ ನಾಮ ನಿರ್ದೇಶಿತ ಸದಸ್ಯ ನಾಗರಾಜ್ ಕಾಂಚನ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶಂಕರ ಪೂಜಾರಿ, ಮುಸ್ತರಿನ್, ಮುಖ್ಯ ಸಲಹೆಗಾರಾದ ಅಬುಶೆಕ್ ಸಾಹೇಬ್, ಉರ್ದು ಶಾಲಾ ಶಾಲಾಭಿವೃದ್ಧಿ ಅಧ್ಯಕ್ಷ ರೌಫ್ ಖಾನ್, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜಕರ ಪ್ರೊ. ಆಕಾಶ್, ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸನ್ಮಾನ ಪತ್ರವನ್ನು ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಕೆ.ಪಿ. ವಾಚಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಶೀಲ ಶೆಟ್ಟಿ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ಶೆಟ್ಟಿ ವಂದಿಸಿದರು. ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ದೇಶ ಭಕ್ತಿಯ ಗೀತ-ನೃತ್ಯಗಳು ನಡೆದವು.