ಸ್ವಾತಂತ್ರ್ಯ ಚಳವಳಿ ಬ್ರಿಟೀಷರಿಂದ ರಾಜಕೀಯ ಸ್ವಾತಂತ್ರ್ಯಕ್ಕೆ ಸೀಮಿತವಾಗಿರಲಿಲ್ಲ: ಪ್ರೊ.ಫಣಿರಾಜ್
ಉಡುಪಿ : ದೇಶದ ಸ್ವಾತಂತ್ರ್ಯಕ್ಕಾಗಿ 90 ವರ್ಷಗಳ ಕಾಲ ನಡೆದ ಸಂಘಟಿತವಾದ ಹೋರಾಟವು ಕೇವಲ ಬ್ರಿಟೀಷರಿಂದ ರಾಜಕೀಯ ಸ್ವಾತಂತ್ರ್ಯ ಪಡೆಯಲು ಸೀಮಿತವಾಗಿರಲಿಲ್ಲ. ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ ಧ್ಯೇಯ ದೊಂದಿಗೆ ನಡೆದ ಸಾಮಾಜಿಕ ಚಳವಳಿಯಾಗಿತ್ತು ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.
77ನೇ ಸ್ವಾತಂತ್ರ್ಯೋತ್ಸವದ ಭಾಗವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿಗಳು ಜಂಟಿಯಾಗಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗಾಗಿ ಉಡುಪಿಯ ಹಳೆ ಸರಕಾರಿ ಬಸ್ ನಿಲ್ದಾಣದ ಬಳಿ ಸೋಮವಾರ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಂದು ಬ್ರಿಟೀಷರ ಆಡಳಿತದಿಂದ ಕೆಳಗೆ ಇಳಿಸಿ ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು ನಿಜವಾದ ಸ್ವಾತಂತ್ರ್ಯ ಅಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರರು ಈಗ ಇದ್ದಿದ್ದರೆ ಹೇಳುತ್ತಿದ್ದರು. ಆಗ ನಮಗೆ ಸಿಕ್ಕಿರುವುದು ರಾಜಕೀಯ ಸ್ವಾತಂತ್ರ್ಯವೇ ಹೊರತು ಭಾರತದ ಜನಸಮೂಹವಾಗಿರುವ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರು, ರೈತರಿಗೆ ಸಿಕ್ಕಿರುವ ಸ್ವಾತಂತ್ರ್ಯ ಅಲ್ಲ. ಆ ಮೂಲಕ ಭಾರತ ಇನ್ನು ಸ್ವಾತಂತ್ರ್ಯ ಪಡೆದಿಲ್ಲ ಎಂದರು.
ಸ್ವಾತಂತ್ರ್ಯ ಚಳವಳಿಯು ಹಸಿವು, ಜಾತಿಮತ ಬೇಧ, ಲಿಂಗ ಬೇಧ, ಮೌಡ್ಯ, ಶೋಷಣೆಗಳಿಂದ ಸ್ವಾತಂತ್ರ್ಯ ಪಡೆಯುವು ದಾಗಿತ್ತು. ಜಾತಿ, ವರ್ಗ, ಲಿಂಗ ಸಮಾನತೆ ಮೂಲಕ ಈ ಸ್ವಾತಂತ್ರ್ಯಕ್ಕೆ ಅರ್ಥ ಸಿಗುತ್ತಿತ್ತು ಎಂಬುದನ್ನು ಹೋರಾಟ ಗಾರರು ನಂಬಿದ್ದರು. ಈ ಸಮಾನತೆಯನ್ನು ದಬ್ಬಾಳಿಕೆ, ಸೈನ್ಯದ ಬಲ, ಪೊಲೀಸರ ಬೆದರಿಯಿಂದ ಸಾಧಿಸುವುದು ಅವರ ಉದ್ದೇಶವಾಗಿರಲಿಲ್ಲ. ಸಹೋದರತ್ವ ಹಾಗೂ ನಮ್ಮ ಮನಸ್ಸಿನ ಮೂಲಕ ನಿಜವಾದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಬರುತ್ತದೆ ಎಂಬ ನಂಬಿಕೆಯ ಚಳವಳಿಯಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟ ನಡೆಯಿತು ಎಂದು ಅವರು ತಿಳಿಸಿದರು.
ಧರಣಿಯಲ್ಲಿ ಸಿಐಟಿಯು ಅಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಶಶಿಧರ ಗೊಲ್ಲ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಚಂದ್ರಶೇಖರ್ ವಿ., ಮುಖಂಡರಾದ ಅದಮಾರು ಶ್ರೀಪತಿ ಆಚಾರ್ಯ, ಕವಿರಾಜ್, ಶೇಖರ ಬಂಗೇರ, ಸುಭಾಷ್ ನಾಯ್ಕ್, ಬಲ್ಕಿಸ್ ಕುಂದಾಪುರ, ನಳಿನಿ, ಸರೋಜ, ಬುದಿಯಾ, ಎಚ್.ನರಸಿಂಹ, ಸದಾಶಿವ ಪೂಜಾರಿ, ರಾಮ ಕರ್ಕಡ, ದಸಂಸ ಮುಖಂಡ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಧರಣಿಯು ರಾತ್ರಿ 12 ಗಂಟೆಗೆ ನಡೆದು ಬಳಿಕ ಸಿಐಟಿಯು ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.