ಭಾರತೀಯ ಪಾಕ ಪದ್ಧತಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸುವುದು ಅಗತ್ಯ: ಚೆಫ್ ವಿಕಾಸ್ ಖನ್ನಾ
ಉಡುಪಿ, ಅ.3: ಭಾರತೀಯ ಪಾಕ ಪದ್ಧತಿಯನ್ನು ಜಗತ್ತಿಗೆ ತೋರಿಸಲು ಭಾರತೀಯ ಪಾಕಪದ್ಧತಿಯನ್ನು ಇನ್ನಷ್ಟು ಜನ ಪ್ರಿಯಗೊಳಿಸಬೇಕಾದ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಬಾಣಸಿಗ ವಿಕಾಸ್ ಖನ್ನಾ ಹೇಳಿದ್ದಾರೆ.
ಮಣಿಪಾಲದ ವೆಲ್‌ಕಮ್ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಆಡ್ಮಿನಿಸ್ಟ್ರೇಷನ್(ವ್ಯಾಗ್ಷ)ದಲ್ಲಿ ಇಂದು ಹಮ್ಮಿ ಕೊಳ್ಳಲಾದ ಭಾರತೀಯ ಪಾಕ ಮತ್ತು ಆಹಾರ ಸಂಸ್ಕೃತಿಯ ಕೇಂದ್ರದ ಉದ್ಘಾಟನೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಜಗತ್ತಿನ ಯಾವುದೇ ದೇಶವು ಬದಲಿಸಲಾಗದ ಅನನ್ಯ ಆಹಾರ ಪದಾರ್ಥಗಳ ಅದ್ಭುತ ಪರಂಪರೆಯನ್ನು ಭಾರತ ಹೊಂದಿದೆ. ಆದುದರಿಂದ ವಿದ್ಯಾರ್ಥಿಗಳು ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಲ್ಲಿ ಭಾರತೀಯ ಪಾಕಪದ್ಧತಿ ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆ ಹೊರತು ವಿಶ್ವ ಪಾಕ ಪದ್ಧತಿಯನ್ನಲ್ಲ ಎಂದರು.
ಭಾರತೀಯ ಪಾಕಪದ್ಧತಿಯು ಜಗತ್ತಿನ ಆಹಾರ ಉತ್ಸಾಹಿಗಳನ್ನು ಆಕರ್ಷಿ ಸುತ್ತಿದೆ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳು ಭಾರತೀಯ ತಿನಿಸುಗಳ ಶ್ರೀಮಂತಿಕೆಯನ್ನು ಇಡೀ ಜಗತ್ತಿಗೆ ಪ್ರಚಾರ ಮಾಡಬೇಕು. ಭಾರತದಲ್ಲಿ ಮೈಕೆಲಿನ್ ಬಾಣಸಿಗ ತಂಡವನ್ನು ರಚಿಸಬೇಕು. ಆ ಮೂಲಕ ಭಾರತೀಯ ಅಡುಗೆಗಳ ಶಕ್ತಿಯನ್ನು ಜಗತ್ತಿಗೆ ತೋರಿಸ ಬೇಕು ಎಂದು ಅವರು ತಿಳಿಸಿದರು.
ಹಲಸಿನ ಹಣ್ಣಿನ ಉಪ್ಪಿನಕಾಯಿ ಮತ್ತು ಮಂಗಳೂರು ಬನ್ ಜೊತೆ ತುಪ್ಪದಲ್ಲಿ ಹುರಿದ ಬಾಳೆಹಣ್ಣು ನನ್ನ ಅತ್ಯುತ್ತಮ ರುಚಿಕರ ಪದಾರ್ಥವಾಗಿದೆ. ಪರಿಮಳ ಯುತವಾದ ಭಾರತೀಯ ಆಹಾರದಿಂದ ಪ್ರೇರಿತವಾದ ಭೂತಾನ್ ಆಹಾರ ವನ್ನು ಕೂಡ ನಾನು ಇಷ್ಟಪಡುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಾಗ್ಷದ ಪ್ರಾಂಶುಪಾಲ ಚೆಫ್ ಕೆ.ತಿರುಜ್ಞಾನ ಸಂಬಂಧಮ್ ಹಾಜರಿದ್ದರು.