ಭಾರತದ ಸ್ವಾತಂತ್ರ್ಯ ಅಪಾಯದಲ್ಲಿದೆ: ಜಯನ್ ಮಲ್ಪೆ
ಮಲ್ಪೆ, ಆ.15: ನಮ್ಮ ದೇಶದಲ್ಲಿ ವೈಚಾರಿಕತೆ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಅಧಿಕಾರ ಶಾಹಿತ್ವ, ಬಂಡವಾಳ ಶಾಹಿತ್ವ, ವೈದಿಕಶಾಹಿತ್ವ, ಧಾರ್ಮಿಕ ಡಾಂಬಿಕತನ, ಸಾಮಾಜಿಕ ಅಸಹಿಷ್ಣತೆ ಈ ದೇಶದ ಸ್ವಾತಂತ್ರ್ಯ ಕಸಿದು ಅಪಾಯಕ್ಕೆ ಸಿಲುಕಿಸಿದೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.
ಮಲ್ಪೆ ಸಿಟಿಜನ್ ಸರ್ಕಲ್ ಅಟೋ ಚಾಲಕ ಮಾಲಕರ ಸಂಘ ಏರ್ಪಡಿಸಿದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ದೇಶದ ಪ್ರಜ್ಞಾವಂತ ಸಮುದಾದಲ್ಲಿ ಸಂಭ್ರಮಕ್ಕೆ ಬದಲಾಗಿ ಸೂತಕದ ಛಾಯೆಗಳು ಮೂಡಿವೆ. ಸ್ವಾತಂತ್ರ್ಯ ಪೂರ್ವ ಕಾಲದ ಹೋರಾಟಗಳು ಮತ್ತು ಸ್ವಾತಂತ್ರ್ಯಾ ನಂತರದ ನಮ್ಮ ಸಂಘರ್ಷ, ನಿರೀಕ್ಷೆಗಳು ಈ ತಲ್ಲಣ ಮತ್ತು ಕಳವಳಕ್ಕೆ ಕಾರಣ ವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಪ್ರವೀಣ್ ಪೂಜಾರಿ ಮಾತನಾಡಿ ದೇಶದೊಳಗಿನ ಅಸಮಾನತೆ ತೊಲಗಿದರೆ ಮಾತ್ರ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಜಾತಿ ಮತ, ಮೇಲು ಕೀಳುಗಳ ವಿರುದ್ಧ ಹೋರಾಡಿದ ನಾರಾಯಣಗುರು ಅಂಬೇಡ್ಕರ್ ಚಿಂತನೆಯನ್ನು ಈ ನೆಲದ ಶೋಷಿತರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಮಾಜ ಸೇವಕ ಶೇಖರ್ ತಿಂಗಳಾಯ, ಶಮ್ಮಿ ಕೊಡವೂರು, ಗಣೇಶ್ ನೆರ್ಗಿ, ಶಾರದ ಕಾಂಚನ್, ಅನಂತ ನೆರ್ಗಿ, ಅಶ್ವಿನಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು. ಬುರಾನ್ ಮಲ್ಪೆ ಸ್ವಾಗತಿಸಿದರು. ರವಿ ನೆರ್ಗಿ ವಂದಿಸಿದರು.