ಭಾರತದ ಕಲ್ಪನೆ ಬಹು ಧಾರ್ಮಿಕ, ಬಹು ಭಾಷಿಕ: ಡಾ.ಶಂಸುಲ್ ಇಸ್ಲಾಂ
ಉಡುಪಿ, ಸೆ.9: ಭಾರತದ ಕಲ್ಪನೆಯು ಬಹು-ಧಾರ್ಮಿಕ, ಬಹು- ಸಾಂಸ್ಕೃತಿಕ ಮತ್ತು ಬಹು-ಭಾಷಿಕವಾಗಿದೆ. ಮತ್ತು ಅದೇ ಭಾರತೀಯ ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯೂ ಆಗಿದೆ ಎಂದು ವಿದ್ವಾಂಸ-ಲೇಖಕ ಮತ್ತು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಶಂಸುಲ್ ಇಸ್ಲಾಂ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸಾಯನ್ಸ್‌ನಲ್ಲಿ ನಡೆದ ಭಾರತೀಯ ಸ್ವಾತಂತ್ರ್ಯ ಹೋರಾಟದ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಭರತದಲ್ಲಿ ಒಂದು ಧರ್ಮ, ಒಂದು ಸಂಸ್ಕೃತಿ ಮತ್ತು ಒಂದು ಭಾಷೆಗೆ ಒತ್ತು ನೀಡುವುದು ಸ್ವಾತಂತ್ರ್ಯ ಹೋರಾಟಗಾರರು ರೂಪಿಸಿದ ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಪ್ರೊ.ಶಂಸುಲ್ ಇಸ್ಲಾಂ ಹೇಳಿದರು.
ದೇಶದ ವೈವಿಧ್ಯತೆ ಕೊನೆಯಾಗಬಾರದು ಮತ್ತು ವಿವಿಧತೆಯಲ್ಲಿ ಏಕತೆಗಾಗಿ ಎಲ್ಲರೂ ಶ್ರಮಿಸಬೇಕು. ಮಹಾತ್ಮಾ ಗಾಂಧೀಜಿ ಮತ್ತು ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟದಲ್ಲಿ ವಿಭಿನ್ನ ಮಾರ್ಗಗಳನ್ನು ಹೊಂದಿದ್ದರೂ ಸಹ, ಅವರ ದಾರಿಗಳು ಪರಸ್ಪರ ಪೂರಕವಾಗಿತ್ತು. 1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಹಿಂದೂ ಗಳು ಮತ್ತು ಮುಸ್ಲಿಮರು ಒಟ್ಟಾಗಿ ಹೋರಾಡಿದ್ದರು. ಆದಾಗ್ಯೂ, 1857ರ ಮೊದಲೇ ಬ್ರಿಟಿಷರ ವಿರುದ್ಧ ಅನೇಕ ದಂಗೆಗಳು ನಡೆದಿದ್ದವು ಎಂದು ಅವರು ನುಡಿದರು.
ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಗಾಂಧೀಜಿ, ಭಗತ್‌ಸಿಂಗ್, ಡಾ.ಅಂಬೇಡ್ಕರ್ ಅವರ ಕುರಿತು ಅಪಪ್ರಚಾರ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಾಥಮಿಕ ಪರಂಪರೆ, ಧಾರ್ಮಿಕ ರಾಷ್ಟ್ರೀಯತೆಯ ವಿರುದ್ಧವಾದ ಉದಾರ ರಾಷ್ಟ್ರೀಯತೆಯಾಗಿದೆ ಎಂದರು.
ಡಾ.ರಾಜಾರಾಂ ತೋಳ್ಪಾಡಿ ಅವರು ಗಾಂಧೀಜಿ ಮತ್ತು ಭಗತ್ ಸಿಂಗ್ ಅವರ ಕುರಿತು ಆಡುಭಾಷೆಯಲ್ಲಿ ಹೆಚ್ಚಿನ ಸಾಹಿತ್ಯದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸಂವಾದದಲ್ಲಿ ಹಲವರು ಭಾಗವಹಿಸಿದ್ದರು.