ಮುಚ್ಚಳಿಕೆ ಬರೆಸಿದರೂ ಗಡುವಿನಲ್ಲಿ ಮುಗಿಯದ ಇಂದ್ರಾಳಿ ಸೇತುವೆ ಕಾಮಗಾರಿ!
ಸುಳ್ಳಾದ ಜ.15ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ
ಉಡುಪಿ, ಜ.14: ಏಳು ವರ್ಷಗಳ ಹಿಂದೆ ಆರಂಭವಾದ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಇಂದ್ರಾಳಿ ಸೇತುವೆ ಕಾಮಗಾರಿಯು ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳು ಸೂಚಿಸಿದ ಅವಧಿಯಲ್ಲಿ ಪೂರ್ಣಗೊಳ್ಳದೇ ಕುಂಟುತ್ತ ಸಾಗುತ್ತಿದೆ. ಇದೀಗ ಜ.15ರೊಳಗೆ ಪೂರ್ಣಗೊಳಿಸುವ ಕುರಿತು ಗುತ್ತಿಗೆದಾರರಿಂದ ಉಡುಪಿ ಸಂಚಾರ ಪೊಲೀಸ್ ಠಾಣೆ ಯಲ್ಲಿ ಬರೆಸಿಕೊಳ್ಳಲಾದ ಮುಚ್ಚಳಿಕೆಯ ಅವಧಿ ಕೂಡ ನಾಳೆಗೆ ಮುಕ್ತಾಯಗೊಳ್ಳಲಿದೆ. ಈ ಮೂಲಕ ಸಂಸದರು ಹಾಗೂ ಅಧಿಕಾರಿಗಳು ನೀಡಿದ ಭರವಸೆ ಮತ್ತೆ ಸುಳ್ಳಾಗಿದೆ. ಈ ಮಧ್ಯೆ ಇನ್ನೂ ಪೂರ್ಣಗೊಳ್ಳದ ಕಾಮಗಾರಿ ವಿರುದ್ಧ ಸಾರ್ವಜನಿಕರು ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಸಿವಿಲ್ ಕಾಮಗಾರಿ ಸೇರಿದಂತೆ ಒಟ್ಟು 13ಕೋಟಿ ರೂ. ವೆಚ್ಚದ 58 ಮೀಟರ್ ಉದ್ದದ ಇಂದ್ರಾಳಿ ಸೇತುವೆ ಕಾಮಗಾರಿಯು 2018ರಲ್ಲಿ ಆರಂಭಿಸ ಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ವಿಳಂಬವಾಗಿ ಕುಂಟುತ್ತ ಸಾಗುತ್ತಿದೆ. ಇದರ ಪರಿಣಾಮವಾಗಿ ಇಲ್ಲಿ ನಡೆಯುತ್ತಿರುವ ನಿರಂತರ ಅಪಘಾತಗಳಿಂದ ಹಲವು ಜೀವಗಳು ಪ್ರಾಣ ಕಳೆದುಕೊಂಡಿವೆ. ಪ್ರತಿದಿನ ಸಂಚಾರ ಸಮಸ್ಯೆ ಯಿಂದ ಸಾರ್ವಜನಿಕರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ.
ಎರಡು ಬಾರಿ ಭರವಸೆ: 2024ರ ಜೂನ್ 29ರಂದು ಇಂದ್ರಾಳಿ ಸೇತುವೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸೆ.15ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ನೀಡಿದ್ದರು. ಆ ಅವಧಿಗೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತು ಕಾಮಗಾರಿ ವಿಳಂಬ ವಿರೋಧಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿ ಹೋರಾಟಕ್ಕೆ ಮುಂದಾಗಿತ್ತು.
ಈ ಮಧ್ಯೆ 2024ರ ಅಕ್ಟೋಬರ್ 23ರಂದು ಸ್ಥಳಕ್ಕೆ ಭೇಟಿ ನೀಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಮಗಾರಿ ಯನ್ನು ಜ.15ರೊಳಗೆ ಪೂರ್ಣ ಗೊಳಿಸುವ ಬಗ್ಗೆ ಗುತ್ತಿಗೆದಾರರಿಂದ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಮಾಡಿಕೊಳ್ಳಲಾಗಿದೆ ಮತ್ತು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಆದರೆ ಈ ಮುಚ್ಚಳಿಕೆ ಗಡುವು ನಾಳೆಗೆ ಮುಗಿಯಲಿದೆ. ಆದರೂ ಕಾಮಗಾರಿ ಕೊನೆಯ ಹಂತಕ್ಕೆ ಬಂದಿಲ್ಲ. ಸದ್ಯಕ್ಕೆ ಕರ್ಡರ್‌ಗಳನ್ನು ಜೋಡಿಸಿ ಇಡಲಾಗಿದೆ.
ಸಮಿತಿಗೆ ಮರುನಾಮಕರಣ: ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬ ವಿರುದ್ಧ ಇಂದ್ರಾಳಿ ಸೇತುವೆ ಹೋರಾಟ ಸಮಿತಿ ಯನ್ನು ರಚಿಸಿ, ಅ. 29ರಂದು ಇಂದ್ರಾಳಿಯಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆಯನ್ನು ಮಾಡಿ, ಕಾಮಗಾರಿ ಮುಗಿಸಲು ಜ.30ರ ಗಡುವು ನೀಡಲಾಗಿತ್ತು.
ಇದೀಗ ಈ ಸಮಿತಿಯನ್ನು ಮೇಲ್ದರ್ಜೆಗೇರಿಸಿ ಉಡುಪಿ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯನ್ನಾಗಿ ಮಾಡಲಾಗಿದೆ. ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ, ಅಂಬಲಪಾಡಿ ಪ್ಲೈಓವರ್ ಕಾಮಗಾರಿ, ಸಂತೆಕಟ್ಟೆ ಕಾಮಗಾರಿ ಅವ್ಯವಸ್ಥೆ ಹಾಗೂ ಆದಿಉಡುಪಿ -ಮಲ್ಪೆ ಕಾಮಗಾರಿ ಸ್ಥಗಿತದ ಹಿನ್ನೆಲೆಯಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ಸಮಿತಿಯನ್ನು ಮರುನಾಮಕರಣ ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದರು.
ಡಿಸಿ, ಎಸ್ಪಿಯಿಂದ ಸ್ಥಳ ಪರಿಶೀಲನೆ
ಇಂದ್ರಾಳಿ ಸೇತುವೆ ಕಾಮಗಾರಿಗೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಜ.15ರಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಈ ಕುರಿತು ವಾರ್ತಾಭಾರತಿ ಜೊತೆ ಮಾತನಾಡಿದ ಜಿಲ್ಲಾಧಿಕಾರಿ, ಇಂದ್ರಾಳಿ ಸೇತುವೆ ಕಾಮಗಾರಿಗೆ ಸಂಬಂಧಿಸಿ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯೆ ಇದ್ದ ಕೆಲವು ಸಮಸ್ಯೆಗಳನ್ನು ಈಗಾಗಲೇ ಪರಿಹರಿಸಲಾಗಿದೆ. ರೈಲ್ವೆಯಿಂದ ಅನುಮತಿ ಕೂಡ ದೊರೆತಿದೆ. ಸೇತುವೆ ಅಳವಡಿಸುವ ಸಂದರ್ಭ ಒಂದು ದಿನ ರೈಲು ಸಂಚಾರ ಸ್ಥಗಿತಗೊಳಿಸ ಬೇಕಾಗುತ್ತದೆ ಮತ್ತು ಎಲೆಕ್ಟ್ರಿಸಿಟಿ ಲೈನ್ ಕೂಡ ಸ್ಥಗಿತಗೊಳಿಸಬೇಕಾಗುತ್ತದೆ. ಅದಕ್ಕೆ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಈಗ ಒಂದು ತಂಡದ ಬದಲು ಎರಡು ತಂಡವಾಗಿ ರಾತ್ರಿ ಹಗಲು ಕೆಲಸ ಮಾಡಲು ಸೂಚಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಜಿಲ್ಲಾ ಪೊಲೀಸ್ ಅಧೀಕ್ಷಕರ ರೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಫೆ.15ರವರೆಗೆ ಅವಧಿ ವಿಸ್ತರಣೆ: ಸಂಸದ ಕೋಟ
ಇಂದ್ರಾಳಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವ ಕುರಿತು ಜ.15ಕ್ಕೆ ದಿನಾಂಕ ನಿಗದಿಪಡಿಸಿ ಇಂಜಿನಿಯರ್ ಮತ್ತು ಗುತ್ತಿಗೆದಾರರಿಂದ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ವಾರದ ಹಿಂದೆ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ಗುತ್ತಿಗೆದಾರರು, ನಿಗದಿ ಪಡಿಸಿದ ದಿನಾಂಕದೊಳಗೆ ಕಾಮಗಾರಿ ಪೂರ್ಣ ಗೊಳಿಸಲು ಸಾಧ್ಯವಾಗದೇ ಇರುವುದರಿಂದ ಸಮಯಾವಕಾಶ ನೀಡುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ಕೂಡ ಜಿಲ್ಲಾಧಿಕಾರಿ ನೀಡಿದ್ದಾರೆ. ರೈಲ್ವೆ ಇಲಾಖೆಯ ಸುಪರ್ದಿಯಲ್ಲೇ ಈ ಕಾಮಗಾರಿ ನಡೆಯಬೇಕಾಗಿರುವುದರಿಂದ ಸ್ವಲ್ಪ ಸಮಯಾವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಅದರಂತೆ ಫೆ.15ರವರೆಗೆ ಸಮಯವನ್ನು ವಿಸ್ತರಣೆ ಮಾಡಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
"ಹೋರಾಟ ಸಮಿತಿಯ ಹೋರಾಟಕ್ಕೂ ಮೊದಲೇ ಸಂಸದರು, ಕಾಮಗಾರಿ ಯನ್ನು ಜ.15ರೊಳಗೆ ಮುಗಿಸುವುದಾಗಿ ಭರವಸೆ ನೀಡಿದ್ದರು. ಆ ಅವಧಿ ನಾಳೆಗೆ ಮುಗಿಯಲಿದೆ. ಇನ್ನು ಒಂದು ದಿನದಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ. ಹೋರಾಟದ ಸಂದರ್ಭದಲ್ಲಿ ನಾವು ಜ.30ರೊಳಗೆ ಕಾಮಗಾರಿ ಮುಗಿಸಬೇಕೆಂಬ ಗಡುವು ಕೊಟ್ಟಿದ್ದೇವೆ. ನಾವು ಕೊಟ್ಟ ಗಡುವಿನಲ್ಲಿ ಕಾಮಗಾರಿ ಮುಗಿಯದಿದ್ದರೆ ಜ.30ರಂದು ಸಂಸದರು ದೊಡ್ಡ ಪ್ರಮಾಣದ ಹೋರಾಟವನ್ನು ಎದುರಿಸ ಬೇಕಾಗುತ್ತದೆ"
-ಅಮೃತ್ ಶೆಣೈ, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ