ಯುದ್ಧಪೀಡಿತ ಇಸ್ರೇಲ್, ಫೆಲೆಸ್ತೀನ್ನಲ್ಲಿರುವ ಉಡುಪಿ ಜಿಲ್ಲೆಯ 63 ಮಂದಿಯ ಮಾಹಿತಿ ಲಭ್ಯ
ಫೈಲ್ ಫೋಟೊ
ಉಡುಪಿ, ಅ.11: ಯುದ್ಧ ಪೀಡಿತ ಇಸ್ರೇಲ್ ಹಾಗೂ ಫೆಲೆಸ್ತೀನ್ಗೆ ವಿವಿಧ ಕೆಲಸಗಳಿಗಾಗಿ ತೆರಳಿ ಅಲ್ಲಿ ಸಿಲುಕಿಕೊಂಡಿರುವ ಉಡುಪಿ ಜಿಲ್ಲೆಯ ಒಟ್ಟು 63 ಮಂದಿಯ ಮಾಹಿತಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ರೂಮ್ಗೆ ಇದುವರೆಗೆ ಲಭ್ಯವಾಗಿದೆ.
ಇಂದು ಸಂಜೆಯವರೆಗೆ ಒಟ್ಟು 63 ಮಂದಿ ಕಂಟ್ರೋಲ್ ರೂಮ್ನ್ನು ಸಂಪರ್ಕಿಸಿ ಅಲ್ಲಿರುವವರ ಬಗ್ಗೆ ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿ ಕೊಂಡಿದ್ದಾರೆ.
ಇವರಲ್ಲಿ ಉಡುಪಿ ತಾಲೂಕಿನ 18 ಮಂದಿ, ಕುಂದಾಪುರ ತಾಲೂಕಿನ 11 ಮಂದಿ, ಕಾರ್ಕಳ ತಾಲೂಕಿನ 11 ಮಂದಿ, ಕಾಪು ತಾಲೂಕಿನ 9 ಮಂದಿ, ಬ್ರಹ್ಮಾವರ ತಾಲೂಕಿನ 11 ಮಂದಿ ಹಾಗೂ ಬೈಂದೂರು ತಾಲೂಕಿನ ಇಬ್ಬರ ಮಾಹಿತಿ ಗಳು ಜಿಲಾಡಳಿಕ್ಕೆ ದೊರಕಿದೆ. ಮಂಗಳೂರಿನ ಶಕ್ತಿನಗರದ ಒಬ್ಬರು ಸಹ ಉಡುಪಿ ಜಿಲ್ಲಾಡಳಿತಕ್ಕೆ ಬಂದಿದೆ.
ಇವರಲ್ಲಿ ಬಹುಪಾಲು ಮಂದಿ ಹೋಮ್ ನರ್ಸ್ ಕೆಲಸಕ್ಕಾಗಿ ಇಸ್ರೇಲಿಗೆ ತೆರಳಿದವರಾಗಿದ್ದಾರೆ. ಇತರ ಉದ್ಯೋಗಕ್ಕೆ ತೆರಳಿದವರು ಸಹ ಇದರಲ್ಲಿ ಸೇರಿದ್ದಾರೆ. ಉಡುಪಿ ಜಿಲ್ಲೆಯ ಒಟ್ಟು ಎಷ್ಟು ಮಂದಿ ಇಸ್ರೇಲ್ ಹಾಗೂ ಫೆಲೆಸ್ತೀನ್ನಲ್ಲಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಜಿಲ್ಲಾಡಳಿತದ ಬಳಿ ಇಲ್ಲದ ಕಾರಣ, ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ರೂಮಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದರು.
ಜಿಲ್ಲಾಧಿಕಾರಿಗಳು ಪ್ರಕಟಣೆ ನೀಡುತಿದ್ದಂತೆ ಇಸ್ರೇಲ್ನಲ್ಲಿ ಸಿಲುಕಿಕೊಂಡಿರುವ ಉಡುಪಿ ಜಿಲ್ಲೆಯ ಪ್ರಜೆಗಳ ಮಾಹಿತಿ ಕಂಟ್ರೋಲ್ ರೂಮಿಗೆ ಬರಲಾರಂಭಿಸಿದೆ. ಆದರೆ ಇದುವರೆಗೆ ಯಾರೂ ಅಲ್ಲಿ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಯಾವುದೇ ಕರೆ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.