ದುಡಿಯುವ ವರ್ಗಕ್ಕೆ ಅನ್ಯಾಯ: ಜಿಲ್ಲಾಡಳಿತವೇ ನೇರ ಹೊಣೆ: ಶಾಸಕ ಸುನಿಲ್ ಕುಮಾರ್
ಉಡುಪಿ, ಸೆ.26: ಅಧಿಕಾರದ ಆಸೆಯಿಂದ ಪಂಚ ಗ್ಯಾರಂಟಿಗಳ ಆಮಿಷ ವೊಡ್ಡಿ ಜನರನ್ನು ದಾರಿ ತಪ್ಪಿಸಿ ಅಧಿಕಾರ ಹಿಡಿದ ಕಾಂಗ್ರೆಸ್, ಒಂದೆರಡು ಸಾವಿರ ಹಣ ನೀಡಿ ಲಕ್ಷಾಂತರ ದುಡಿಯುವ ಕೈಗಳನ್ನು ಕಿತ್ತುಕೊಂಡಿದೆ. ಜಿಲ್ಲೆಯಲ್ಲಿ ದುಡಿಯುವ ವರ್ಗಕ್ಕೆ ಆದ ಅನ್ಯಾಯಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ. ಈ ತಕ್ಷಣವೇ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ತುರ್ತು ಸಭೆ ಕರೆದು ಸಮಸ್ಯೆ ನಿವಾರಿಸಬೇಕು ಎಂದು ಮಾಜಿ ಸಚಿವ, ಶಾಸಕ ವಿ.ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ವ್ಯವಸ್ಥೆಯನ್ನು ಕರಾವಳಿ ಜಿಲ್ಲೆಗೆ ಹೇರಲಾಗಿದೆ. ಜಿಲ್ಲೆಯ ಬಡ ಕಾರ್ಮಿಕರು, ದುಡಿಯುವ ವರ್ಗದ ಮೇಲೆ ಗದಾಪ್ರಹಾರ ನಡೆಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಕಲ್ಲು, ಮರಳು, ಮಣ್ಣು, ಕೆಂಪು ಕಲ್ಲು ಸಾಗಾಟ ನಿರ್ಬಂಧದಿಂದ ಇಡೀ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದೆ. ಕೆಂಪುಕಲ್ಲು, ಮರಳು, ಕಟ್ಟಡ ನಿರ್ಮಾಣ, ನಿರ್ಮಾಣದ ಸಾಮಗ್ರಿ ಸಹಿತ ಎಲ್ಲದರ ಸಾಗಾಟಕ್ಕೆ ನಿರ್ಬಂಧ, ಕಡಿವಾಣದಿಂದ ಬಡ ದುಡಿಯುವ ವರ್ಗದ ಹೊಟ್ಟೆಗೆ ಏಟು ಬಿದ್ದಿದೆ ಎಂದು ಅವರು ದೂರಿದರು.