ಬಿಡುವು ಪಡೆದ ಮಳೆ; ಸಾಮಾನ್ಯ ಸ್ಥಿತಿಯತ್ತ ಜನರ ಬದುಕು
ಹೆಬ್ರಿ ಅಲ್ಬಾಡಿಯಲ್ಲಿ ಅಡಿಕೆ ತೋಟಕ್ಕೆ ಹಾನಿ; ಅಪಾರ ನಷ್ಟ
ಉಡುಪಿ, ಜು.25: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತಿದ್ದ ಮಳೆ ಇಂದು ಅಪರಾಹ್ನದ ಸುಮಾರಿಗೆ ಬಿಡುವು ಪಡೆದಿದ್ದು, ಇದರಿಂದ ಜಿಲ್ಲೆ ಸಾಮಾನ್ಯ ಸ್ಥಿತಿಯತ್ತ ಮರಳುವಂತಾಗಿದೆ. ಈ ನಡುವೆ ಗಾಳಿ -ಮಳೆಯಿಂದ ಜಿಲ್ಲೆಯಾದ್ಯಂತ ಅಪಾರ ಹಾನಿ ಸಂಭವಿಸಿದ್ದು, ದಿನದಲ್ಲಿ 40ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಹೆಬ್ರಿ ತಾಲೂಕಿನ ಅಲ್ಬಾಡಿ ಗ್ರಾಮದ ಉದಯಕುಮಾರ್ ಶೆಟಿಟ ಎಂಬವರ ಅಡಿಕೆ ತೋಟ ಗಾಳಿ-ಮಳೆಯಿಂದ ಹಾನಿಗೊಳಗಾಗಿದ್ದು ಇದರಿಂದ ಲಕ್ಷಾಂತರ ರೂ. ನಷ್ಟವಾಗಿರುವುದಾಗಿ ತಿಳಿದುಬಂದಿದೆ. ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಹರಿಣಾಕ್ಷಿ ಎಂಬವರ ಮನೆಯ ಕೋಳಿ ಗೂಡಿಗೆ ನೀರು ನುಗ್ಗಿ 16 ಕೋಳಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಕಳೆದ ರವಿವಾರ ಅಲೆವೂರು ಗ್ರಾಮದ ಗ್ರಾಪಂ ಬಳಿ ಮರಬಿದ್ದು ಅಲ್ಲಿಯೇ ನಿಂತಿದ್ದ ಅನಿಲ್‌ಕುಮಾರ್ ಎಂಬವರಿಗೆ ಮರದ ಕೊಂಬೆ ಬಡಿದು ಗಾಯ ವಾಗಿತ್ತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಸಿಲಾಗಿದೆ. ಅವರ ದ್ವಿಚಕ್ರ ವಾಹನ ಸಹ ಜಖಂಗೊಂಡಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಇಂದು 36 ಮನೆಗಳಿಗೆ ಹಾನಿಯಾದ ವರದಿ ಬಂದಿದ್ದು, ಬೈಂದೂರಿನ ಉಪ್ಪುಂದ, ಕಾಪುವಿನ ಬೆಳ್ಳೆ ಹಾಗೂ ಕುಂದಾಪುರದ ಹಳ್ನಾಡು ಗ್ರಾಮದಲ್ಲಿ ಮೂರು ಜಾನುವಾರು ಕೊಟ್ಟಿಗೆಗಳಿಗೂ ಹಾನಿಯಾಗಿ ಒಟ್ಟು ಸುಮಾರು 1.25 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಹವಾಮಾನ ಇಲಾಖೆಯಿಂದ ಇಂದು ಬೆಳಗ್ಗೆ 8:30ರವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಇದೀಗ ಜು.27ರ ಬೆಳಗ್ಗೆ 8:30ರವರೆಗೆ ಎರಡು ದಿನ ಗಳ ಕಾಲ ಆರೆಂಜ್ ಅಲರ್ಟ್‌ನ್ನು ನೀಡಲಾಗಿದೆ. ಅನಂತರ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್‌ನ್ನು ಹವಾಮಾನ ಇಲಾಖೆ ನೀಡಿದೆ. ಇದರೊಂದಿಗೆ ವೇಗದ ಗಾಳಿ ಹಾಗೂ ಪ್ರಕ್ಷುಬ್ಧ ಕಡಲು, ಅಲೆಗಳ ಅಬ್ಬರದ ಎಚ್ಚರಿಕೆಯನ್ನು ನೀಡಲಾಗಿದೆ. ಪ್ರಸ್ತುತ ಬಜೆ ಡ್ಯಾಮಿನ ನೀರಿನ ಮಟ್ಟ 7.55ಮೀ. ಆದರೆ, ಕಾರ್ಕಳ ಮುಂಡ್ಲಿಯಲ್ಲಿ ನೀರಿನ ಮಟ್ಟ 6.7ಮೀ. ಆಗಿದೆ.
ಸರಾಸರಿ 102.2ಮಿ.ಮೀ. ಮಳೆ: ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ರವರೆಗೆ ಸರಾಸರಿ 102.3ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ 139.9 ಮಿ.ಮೀ., ಹೆಬ್ರಿಯಲ್ಲಿ 118.2, ಕುಂದಾಪುರದಲ್ಲಿ 107.3, ಕಾರ್ಕಳ ದಲ್ಲಿ 91.4, ಉಡುಪಿ 83.0, ಬ್ರಹ್ಮಾವರ 72.5 ಹಾಗೂ ಕಾಪುವಿನಲ್ಲಿ 64.5 ಮಿ.ಮೀ. ಮಳೆಯಾಗಿದೆ.
36 ಮನೆಗಳಿಗೆ 15 ಲಕ್ಷ ರೂ.ನಷ್ಟ: ಮಂಗಳವಾರ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿದ ಒಟ್ಟು 36 ಪ್ರಕರಣಗಳು ದಾಖಲಾಗಿದ್ದು, ಇವುಗಳಿಂದ ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ.
ಉಡುಪಿ ತಾಲೂಕಿನಲ್ಲಿ 11 ಪ್ರಕರಣಗಳು ವರದಿಯಾಗಿದ್ದು 5.15 ಲಕ್ಷ ರೂ., ಕುಂದಾಪುರ ತಾಲೂಕಿನಲ್ಲಿ 11 ಪ್ರಕರಣಗಳಿಂದ 3.50 ಲಕ್ಷ ರೂ., ಕಾಪುವಿನ ಒಂದು ಪ್ರಕರಣದಿಂದ 2.15 ಲಕ್ಷ ರೂ., ಬೈಂದೂರಿನ ಆರು ಪ್ರಕರಣಗಳಿಂದ 2.10 ಲಕ್ಷ ರೂ., ಬ್ರಹ್ಮಾವರದಲ್ಲಿ ಮೂರು ಪ್ರಕರಣಗಳಿಂದ 1.05 ಲಕ್ಷ ರೂ., ಹೆಬ್ರಿ ಮತ್ತು ಕಾರ್ಕಳದ ತಲಾ ಎರಡು ಪ್ರಕರಣಗಳಿಂದ ಕ್ರಮವಾಗಿ 60 ಮತ್ತು 40 ಸಾವಿರ ರೂ.ನಷ್ಟವಾಗಿರುವ ವರದಿಗಳು ಬಂದಿವೆ.
ಕಾಪು ತಾಲೂಕಿನ ನಡ್ಸಾಲ್‌ನಲ್ಲಿ ಸಾವಿತ್ರಿ ಎಂಬವರ ಮನೆ ಗಾಳಿ-ಮಳೆಗೆ ಸಂಪೂರ್ಣ ಕುಸಿದಿದ್ದು 2.15ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾ ಗಿದೆ. ಉಡುಪಿಯ ಶಿವಳ್ಳಿಯಲ್ಲಿ ಸುಧಾಕರ ಶೆಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು ಒಂದು ಲಕ್ಷ ರೂ., ಆತ್ರಾಡಿಯ ಅಮ್ಮಣ್ಮಿ ರಾಮ ಪೂಜಾರಿ ಎಂಬವರ ಮನೆಗೆ ಒಂದು ಲಕ್ಷ ರೂ. ಹಾಗೂ ಹಿರೇಬೆಟ್ಟು ಗ್ರಾಮದ ಹರೀಶ್ ಎಂಬವರ ಮನೆಗೆ ಹಾನಿಯಾಗಿ ಒಂದು ಲಕ್ಷ ರೂ. ನಷ್ಟ ಸಂಭವಿಸಿದೆ.
ನಿರೋಡಿ ಕಾಲುಸೇತುವೆ: ತಾತ್ಕಾಲಿಕ ದುರಸ್ಥಿ
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಗಂಗನಾಡು ರಸ್ತೆಯಿಂದ ನೀರೋಡಿಗೆ ಹೋಗುವ ರಸ್ತೆಯ ಲಕ್ಷ್ಮಣ ಮರಾಠಿ ಮನೆ ಹತ್ತಿರ ಇರುವ ಕಾಲು ಸೇತುವೆಗೆ ಸದ್ಯ ತಾತ್ಕಾಲಿಕವಾಗಿ ಮಣ್ಣು ತುಂಬಿಸಿ ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ ಎಂದು ಬೈಂದೂರು ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಯವರು ತಿಳಿಸಿದ್ದಾರೆ.
ಜು.24ರಂದು ಸುರಿದ ಭಾರಿ ಮಳೆಗೆ ತಗ್ಗರ್ಸೆ ಗ್ರಾಮದ ನೀರೋಡಿ ಎಂಬಲ್ಲಿ ನಿರ್ಮಿಸಲಾದ ಕಿರು ಸೇತುವೆ ಭಾರೀ ಮಳೆಯಿಂದಾಗಿ ಕೊಚ್ಚಿ ಕೊಂಡು ಹೋಗಿತ್ತು. ಕಳೆದ ವರ್ಷ ಪಟ್ಟಣ ಪಂಚಾಯತ್ ವತಿಯಿಂದ 3 ಲಕ್ಷ ರೂ. ವೆಚ್ಚದಲ್ಲಿ ಈ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿಯುತಿದ್ದ ಭಾರೀ ಮಳೆಗೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ನಿರೋಡಿಯ 20 ಮನೆಗಳಿಗಿದ್ದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಮರಾಠ ಜನಾಂಗದವರೇ ಹೆಚ್ಚಿರುವ ಸ್ಥಳೀಯರು, ವಿದ್ಯಾರ್ಥಿಗಳು, ರೈತರು, ಕೂಲಿಕಾರ್ಮಿಕರು ಇದರಿಂದ ತೊಂದರೆ ಅನುಭವಿಸುವಂತಾಗಿತ್ತು.
ನಿರೋಡಿಗೆ ಸಂಪರ್ಕಿಸಲು ಪರ್ಯಾಯ ಕಾಲು ದಾರಿ ಇದ್ದು, ನಿರೋಡಿ ಸಿಂಧಿ ಗೋವಿಂದ ಮರಾಠಿ ಮನೆಯ ಹತ್ತಿರ ಕಾಲು ದಾರಿಯಿಂದ 2 ಸಣ್ಣ ತೋಡುಗಳನ್ನು ದಾಟಿ ಸಂಪರ್ಕಿಸಬಹುದಾಗಿದೆ. ಇದರಿಂದ ಸುಮಾರು 1 ಕಿ.ಮೀ. ಹೆಚ್ಚು ಕ್ರಮಿಸಬೇಕಾಗುತ್ತದೆ. ಇನ್ನೊಂದು ಗಂಗನಾಡು ಹೋಗುವ ರಸ್ತೆಯ ಎತ್ತಬೇರು ಆನಂದ ಗಾಣಿಗ ಮನೆಯಿಂದ ಸುಬ್ಬಣ್ಣ ಆಚಾರಿಯ ಮನೆಯ ಮೂಲಕ ಕಾಲು ದಾರಿಯಲ್ಲಿ ನಿರೋಡಿಗೆ ಸಂಪರ್ಕಿಸಬಹುದು. ಇದಕ್ಕೆ 3 ಕಿ.ಮೀ ಹೆಚ್ಚಿಗೆ ಕ್ರಮಿಸಬೇಕಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ: ಬುಧವಾರವೂ ಶಾಲೆಗಳಿಗೆ ರಜೆ
ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಭಾರೀ ಮಳೆಯ ಮುನ್ಸೂಚನೆ ನೀಡಿರುವುದರಿಂದ ಮುಂಜಾ ಗೃತ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜು.26ರ ಬುಧವಾರದಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರ ಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.