ವೈದ್ಯರು ಗುಣಮಟ್ಟದ ಆರೋಗ್ಯಯುತ ಜೀವನ ಕಲ್ಪಿಸುವುದು ಅಗತ್ಯ: ಪ್ರೊ.ಕೆ.ಪಿ.ರಾವ್
ಉಡುಪಿ, ಸೆ.1: ವೈದ್ಯರು ಕೇವಲ ರೋಗವನ್ನು ಗುಣಪಡಿಸುವುದರ ಬಗ್ಗೆ ಅಷ್ಟೇ ಯೋಚಿಸದೆ ಗುಣಮಟ್ಟದ ಆರೋಗ್ಯ ಯುತ ಜೀವನವನ್ನು ಸಾಗಿಸಲು ನೆರವಾಗಬೇಕು ಎಂದು ವಿಜ್ಞಾನಿ ಹಾಗೂ ಮಣಿಪಾಲ ಎಂ.ಐ.ಟಿಯ ನಿವೃತ್ತ ಪ್ರಾಧ್ಯಾಪಕ ಕೆ.ಪಿ.ರಾವ್ ಹೇಳಿದ್ದಾರೆ.
ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಗುರುವಾರ ನಡೆದ ವಿಶಿಖಾನುಪ್ರವೇಶ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ, ವೈದ್ಯ ವೃತ್ತಿಗೆ ಆದ್ಯತೆ ನೀಡಿ ಆಯುರ್ವೇದ ಜ್ಞಾನವನ್ನು ಕ್ರಿಯಾತ್ಮಕವಾಗಿ ಉಪಯೋಗಿಸಿ ಸಮಾಜಮುಖಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸ್ನಾತಕ ವಿದ್ಯಾರ್ಥಿನಿ ಡಾ.ಪ್ರಜ್ಞಾ ಎನ್. ಅವರಿಗೆ ಉತ್ತಮ ಫಲಿತಾಂಶಕ್ಕಾಗಿ ಚಿನ್ನದ ಪದಕವನ್ನು ನೀಡಲಾಯಿತು. ಕಾಲೇಜಿನ ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಡಾ.ಶ್ರೀಲತಾ ಕಾಮತ್ 73 ಸ್ನಾತಕ ಮತ್ತು 39 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.ಅಶೋಕ್ ಕುಮಾರ್ ಬಿ.ಎನ್. ಹಾಗೂ ಸ್ನಾತಕ ವಿಭಾಗದ ಡೀನ್ ಡಾ.ರಜನೀಶ್ ವಿ.ಗಿರಿ ಪಟ್ಟಿ ವಾಚಿಸಿದರು. ಉಪಪ್ರಾಂಶುಪಾಲ ಡಾ.ನಿರಂಜನ್ ರಾವ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಮತ್ತು ಡಾ. ಶುಭ ಪಿ.ಯು. ಕಾರ್ಯಕ್ರಮ ನಿರೂಪಿಸಿದರು.